ಬೆಂಗಳೂರು: ವಿವಿ ಅಧಿಕಾರಿಗಳೆಂದು ಕಾಲೇಜು ಪರಿಶೀಲನೆಗೆ ಬಂದು ನಗದು ದೋಚಿದರು!

Update: 2018-03-13 15:50 GMT

ಬೆಂಗಳೂರು, ಮಾ.13: ರಾಜೀವ್ ಗಾಂಧಿ ವಿಶ್ವವಿದ್ಯಾನಿಯಲದ ಅಧಿಕಾರಿಗಳೆಂದು ಖಾಸಗಿ ಕಾಲೇಜು ಪರಿಶೀಲನೆಗೆ ಬಂದ ದುಷ್ಕರ್ಮಿಗಳು, ನಗದು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ನಗರದ ಲಗ್ಗೆರೆಯಲ್ಲಿರುವ ಬೆಥೆಲ್ ಕಾಲೇಜಿಗೆ ಮಾ.7ರಂದು ಎಂಟು ಮಂದಿ ಅಪರಿಚಿತರು ರಾಜೀವ್ ಗಾಂಧಿ ವಿವಿಯ ಕುಲಪತಿ ರಮೇಶ್ ಹೆಸರು ಹೇಳಿಕೊಂಡು ಪರಿಶೀಲನೆಗೆ ಬಂದಿದ್ದೇವೆ ಎಂದಿದ್ದರು. ಬಳಿಕ ಕಾಲೇಜಿನ ಆಡಳಿತ ಮಂಡಳಿ ಸಿಬ್ಬಂದಿ ಪರಿಶೀಲನೆಗೆ ಅವಕಾಶ ನೀಡಿತ್ತು ಎನ್ನಲಾಗಿದೆ.

ಆದರೆ, ಪರಿಶೀಲನೆ ನೆಪದಲ್ಲಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ ಎಂಟು ಮಂದಿ, ಕೊನೆಗೆ ಕಾಲೇಜಿನ ಲಾಕರ್‌ನಲ್ಲಿದ್ದ ನಗದು, ಅಕೌಂಟ್ಸ್ ರಿಜಿಸ್ಟರ್ ಪುಸ್ತಕ ಕಳವು ಮಾಡಿರುವುದಾಗಿ ಬೆಥೆಲ್ ಕಾಲೇಜಿನ ಸಿಬ್ಬಂದಿ ಶಿಬಾ ಜೋಸೆಫ್ ಎಂಬುವರು ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಕಾಲೇಜಿನ ಸಿಸಿಟಿವಿಯಲ್ಲಿ ಆರೋಪಿಗಳ ದೃಶ್ಯ ಸೆರೆಯಾಗಿದ್ದು, ಇವರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News