ಗೋರಖ್ ಪುರ, ಫುಲ್ಪುರದಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿಗಳು

Update: 2018-03-14 12:46 GMT

ಲಕ್ನೋ, ಮಾ.14: ಇಲ್ಲಿನ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಸೋಲುವುದು ಬಹುತೇಕ ಖಚಿತವಾಗಿದ್ದರೂ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.

ಎರಡೂ ಕ್ಷೇತ್ರಗಳಲ್ಲಿ ಬಿಎಸ್ ಪಿ ಬೆಂಬಲದೊಂದಿಗೆ ಸಮಾಜವಾದಿ ಪಕ್ಷವು ಬಿಜೆಪಿ ಭಾರೀ ಆಘಾತವನ್ನೇ ನೀಡಿದೆ. ಆದರೆ ಕಾಂಗ್ರೆಸ್ ಹೀನಾಯವಾಗಿ ಸೋತಿದೆ.

ಇಂದು ಸಂಜೆಯವರೆಗೂ ಕಾಂಗ್ರೆಸ್ ಕೇವಲ ಫುಲ್ಪುರ್ ಹಾಗು ಗೋರಖ್ ಪುರದಲ್ಲಿ ಕ್ರಮವಾಗಿ 16,788 ಹಾಗು 10,322 ಮತಗಳನ್ನು ಗಳಿಸಿತ್ತು. ಸಮಾಜವಾದಿ ಪಕ್ಷವು ಗೋರಖ್ ಪುರದಲ್ಲಿ 3,77, 142 ಮತಗಳನ್ನು ಗಳಿಸಿದ್ದರೆ, ಫುಲ್ಪುರದಲ್ಲಿ 3,18,942 ಮತಗಳನ್ನು ಗಳಿಸಿದೆ. ಬಿಜೆಪಿ ಗೋರಖ್ ಪುರ ಹಾಗು ಫುಲ್ಪುರದಲ್ಲಿ ಕ್ರಮವಾಗಿ 3,54,192 ಹಾಗು 2,67,776 ಮತಗಳನ್ನು ಗಳಿಸಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್ ನ ಪ್ರದರ್ಶನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಉಪಚುನಾವಣೆಯ ಫಲಿತಾಂಶವು ಜನರಿಗೆ ಬಿಜೆಪಿ ಮೇಲಿರುವ ಸಿಟ್ಟನ್ನು ತೋರಿಸಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News