ತಂದೆಯ ಅಂತ್ಯಕ್ರಿಯೆಯಂದೇ ಪರೀಕ್ಷೆ ಬರೆದ ಬಾಲಕಿಯರು

Update: 2018-03-15 04:47 GMT

ಮುಂಬೈ, ಮಾ.15: ಮಹಾರಾಷ್ಟ್ರದ ದಹನು ಬಳಿಯ ಪುಂಜಾವೆ ಎಂಬ ಗ್ರಾಮದ ಇಬ್ಬರು ಹದಿಹರೆಯದ ಸಹೋದರಿಯರು ತಂದೆಯ ಅಂತ್ಯಕ್ರಿಯೆಯಂದೇ 12ನೇ ತರಗತಿಯ ಪರೀಕ್ಷೆ ಬರೆದ ಘಟನೆ ವರದಿಯಾಗಿದೆ.

ಸೋಮವಾರ ರಾತ್ರಿ ವಿನೋದ್ ಚೌಧರಿ (45) ಎಂಬ ರೈತ ಧೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದರು. ಚೌಧರಿ, ಪೂಜಾ ಹಾಗೂ ದೀಪಿಕಾ ಎಂಬ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳು ಮತ್ತು ಪತ್ನಿ ಸರಿತಾ ಅವರನ್ನು ಅಗಲಿದ್ದರು.

ತಂದೆಯ ಅಗಲಿಕೆಯ ದುಃಖದ ನಡುವೆಯೂ ಈ ಸಹೋದರಿಯರು 12ನೇ ತರಗತಿಯ ಕೊನೆಯ ಪರೀಕ್ಷೆಯಾಗಿದ್ದ ಭೂಗೋಳ ಪರೀಕ್ಷೆಗೆ ಹಾಜರಾದರು. "ಮಂಗಳವಾರ ಮುಂಜಾನೆ ಈ ಸಹೋದರಿಯರ ಮಾವ ಕಾಲೇಜಿಗೆ ಬಂದು ಈ ಘಟನೆಯನ್ನು ವಿವರಿಸಿದರು" ಎಂದು ದಂಪಚೇರಿ ವಿನಾಯಕ ಬಿ. ಪಾಟೀಲ ಕಿರಿಯ ಕಾಲೇಜಿನ ಪ್ರಾಚಾರ್ಯ ನಾರಾಯಣ ತುವೇರ್ ಹೇಳಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವಂತೆ ಪ್ರಾಚಾರ್ಯರು ಹಾಗೂ ಪ್ರೊಫೆಸರರ್ ವಿನೋದ್ ಸೋನಾವಾನೆ ಮನವೊಲಿಸಿದರು. ಪರೀಕ್ಷೆ ಬರೆಯದಿದ್ದರೆ ಅಮೂಲ್ಯ ಒಂದು ವರ್ಷವೇ ಹಾಳಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಸಹೋದರಿಯರು ಪರೀಕ್ಷೆ ಬರೆದರು.

"ಆರಂಭದಲ್ಲಿ ಪರೀಕ್ಷೆ ಬರೆಯಲು ಅವರು ನಿರಾಕರಿಸಿದರೂ ಕೌನ್ಸಿಲಿಂಗ್ ಮಾಡಿದ ಬಳಿಕ ಒಪ್ಪಿಕೊಂಡರು. ಪರೀಕ್ಷಾ ಕೇಂದ್ರ ನಮ್ಮ ಕಾಲೇಜಿನಿಂದ ಎಂಟು ಕಿಲೋಮೀಟರ್ ದೂರ ಇದ್ದು, ಅಲ್ಲಿಯವರೆಗೂ ಬೈಕ್‌ನಲ್ಲಿ ಹಿಂಬಾಲಿಸಿದೆವು. ಮಧ್ಯಾಹ್ನ 12:30ರ ವೇಳೆಗೆ ಅಂತ್ಯ ಸಂಸ್ಕಾರ ನಡೆಯಿತು. ಈ ವೇಳೆ ಸಹೋದರಿಯರು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದರು" ಎಂದು ಪ್ರಾಚಾರ್ಯರು ವಿವರಿಸಿದರು.

"ಶಿಕ್ಷಕಿಯರಾಗುವ ಆಕಾಂಕ್ಷೆ ಹೊಂದಿರುವ ಬಾಲಕಿಯರು ತಮ್ಮ ಗುರಿ ಸಾಧನೆಯ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ" ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News