ನಮ್ಮ ವಿರುದ್ಧ ರೆಡ್ಡಿ, ಕಲ್ಯಾಣ್ ರನ್ನು ಛೂ ಬಿಡುತ್ತಿರುವ ಮೋದಿ: ಚಂದ್ರಬಾಬು ನಾಯ್ಡು ಆರೋಪ

Update: 2018-03-15 08:21 GMT

ಹೊಸದಿಲ್ಲಿ, ಮಾ.15: ತಮಿಳುನಾಡಿನಲ್ಲಿ ಇಪಿಎಸ್ (ಪನೀರ್ ಸೆಲ್ವಂ) ಬಣದ ವಿರುದ್ಧ ಒಪಿಎಸ್ (ಎಡಪ್ಪಾಡಿ ಪಳನಿಸ್ವಾಮಿ) ಬಣವನ್ನು ಎತ್ತಿಕಟ್ಟಿದ ತಂತ್ರವನ್ನೇ ಪ್ರಧಾನಿ ನರೇಂದ್ರ ಮೋದಿ ಆಂಧ್ರದಲ್ಲೂ ಅನುಸರಿಸುತ್ತಿದ್ದು, ತಮ್ಮ ವಿರುದ್ಧ ವೈಎಸ್‌ಆರ್‌ನ ಜಗನ್ಮೋಹನ ರೆಡ್ಡಿ ಹಾಗೂ ಜನಸೇನಾದ ಪವನ್ ಕಲ್ಯಾಣ್ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ತೆಲುಗುದೇಶಂ ಮುಖಂಡ ಮತ್ತು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಆಂಧ್ರದ ನ್ಯಾಯಬದ್ಧ ಹಕ್ಕನ್ನು ಒದಗಿಸುವ ಬದಲು ನಮ್ಮ ವಿರುದ್ಧ ಇವರಿಬ್ಬರನ್ನು ಛೂ ಬಿಟ್ಟು, ತಮಿಳುನಾಡಿನಲ್ಲಿ ಆಡಿದ ಆಟವನ್ನೇ ಅಡಲು ಮೋದಿ ಮುಂದಾಗಿದ್ದಾರೆ ಎಂದು ಪಕ್ಷದ ಸಂಸದರನ್ನು ಉದ್ದೇಶಿಸಿ ಟೆಲಿಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು ಆಪಾದಿಸಿದರು.

ದೇಶದಲ್ಲಿ ಪ್ರಬಲವಾದ ಮೋದಿ ವಿರೋಧಿ ಅಲೆ ಮತ್ತು ಬಿಜೆಪಿ ವಿರೋಧಿ ಅಲೆ ಇರುವುದು ನಿನ್ನೆಯ ಉಪ ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಬಿಜೆಪಿಯ ಭದ್ರ ನೆಲೆಯಾಗಿದ್ದ ಗೋರಖ್‌ಪುರ ಸೇರಿದಂತೆ ಎರಡೂ ಕ್ಷೇತ್ರಗಳನ್ನು ಆ ಪಕ್ಷ ಕಳೆದುಕೊಂಡಿದೆ. ಬಿಹಾರದಲ್ಲಿ ಆರ್‌ಜೆಡಿಯ ಎರಡು ಸ್ಥಾನಗಳನ್ನು ಕಿತ್ತುಕೊಳ್ಳಲೂ ವಿಫಲವಾಗಿದೆ ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News