ಮೋದಿ ಹೇಳದ್ದನ್ನು ನಾವು ಹೇಳುತ್ತೇವೆ ಎಂದು ರಾಹುಲ್‌ಗೆ ಅಭಯ ನೀಡಿದರೇ ಫ್ರಾನ್ಸ್ ಅಧ್ಯಕ್ಷ ?

Update: 2018-03-15 08:40 GMT

ಹೊಸದಿಲ್ಲಿ, ಮಾ.15: ವಿವಾದದ ಬಿರುಗಾಳಿ ಎಬ್ಬಿಸಿರುವ ರಫೇಲ್ ಖರೀದಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಲಾಗದ ಅಂಶಗಳನ್ನು ಬಹಿರಂಗಪಡಿಸಲು ನಮ್ಮ ಅಭ್ಯಂತರವೇನೂ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಫ್ರಾನ್ಸ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಭರವಸೆ ನೀಡಿದೆ ಎಂದು ಹೇಳಲಾಗುತ್ತಿದೆ.

ಈ ವಾರ ಭಾರತಕ್ಕೆ ಭೇಟಿ ನೀಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಜತೆ ಒಂದು ಗಂಟೆಯ ಮಾತುಕತೆ ವೇಳೆ ರಾಹುಲ್, ರಫೇಲ್ ಖರೀದಿ ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆಯೇ? ಬಹುಶಃ ಹೌದು ಎಂದು ಆಪ್ತ ಮೂಲಗಳು ಹೇಳುತ್ತವೆ. ಈ ಮಾತುಕತೆ ವೇಳೆ ಫ್ರಾನ್ಸ್ ನಿಯೋಗ ಕಾಂಗ್ರೆಸ್‌ಗೆ ಈ ಭರವಸೆ ನೀಡಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಫ್ರಾನ್ಸ್ ಅಧ್ಯಕ್ಷರ ಜತೆ ರಾಹುಲ್, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಜತೆ ಚರ್ಚಿಸಿದರೆ, ನಿಯೋಗದಲ್ಲಿದ್ದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಆರ್ಥಿಕ ಸ್ಥಿತಿಗತಿಯ ವಿವರ ನೀಡಿದರು. ರಾಜ್ಯಸಭೆಯ ಉಪನಾಯಕ ಆನಂದ್ ಶರ್ಮಾ ಕೂಡಾ ನಿಯೋಗದಲ್ಲಿದ್ದರು. ರಾಹುಲ್ ಇಂಥ ರಾಜತಾಂತ್ರಿಕ ತಾಲೀಮಿನಲ್ಲಿ ತೊಡಗಿರುವುದು ಇದೇ ಮೊದಲು. ಈ ಮೊದಲು ವಿದೇಶಿ ಗಣ್ಯರ ಜತೆ ಸೋನಿಯಾ ಮಾತುಕತೆ ನಡೆಸುತ್ತಿದ್ದರು.

ಯುಪಿಎ ಸರ್ಕಾರ ನಿಗದಿಪಡಿಸಿದ್ದ ದರದ ಮೂರು ಪಟ್ಟು ದರದಲ್ಲಿ ಎನ್‌ಡಿಎ ಸರ್ಕಾರ ರಫೇಲ್ ಜೆಟ್ ಖರೀದಿಸಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಯುಪಿಎ ಸರ್ಕಾರ 562.1 ಕೋಟಿ ರೂ.ಗೆ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ತಾನು ಖರೀದಿಸಿದ ದರ ಬಹಿರಂಗಪಡಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಿರಾಕರಿಸಿದ್ದರು. ಆದರೆ ದಸ್ಸಾಲ್ಟ್ ಏವಿಯೇಶನ್ ತನ್ನ ವಾರ್ಷಿಕ ವರದಿಯಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು 1,670 ಕೋಟಿ ರೂ.ಗೆ ಮಾರಾಟ ಮಾಡಿದ್ದಾಗಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News