12ನೆ ತರಗತಿಯ ಪ್ರಶ್ನೆಪತ್ರಿಕೆ ಲೀಕ್ ಆಗಿಲ್ಲ: ಸಿಬಿಎಸ್ ಇ

Update: 2018-03-15 13:47 GMT

ಹೊಸದಿಲ್ಲಿ, ಮಾ.15: 12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಕುರಿತು ತನಿಖೆಗೆ ದಿಲ್ಲಿ ಸರಕಾರ ಆದೇಶ ನೀಡಿರುವ ಮಧ್ಯೆಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಈ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಯು ಗುರುವಾರದಂದು ಸ್ಪಷ್ಟಪಡಿಸಿದೆ.

ಪರೀಕ್ಷೆಯಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ಯಾರೋ ದುಷ್ಕರ್ಮಿಗಳು ಇಂಥ ವದಂತಿಯನ್ನು ಹರಿಯಬಿಡುತ್ತಿದ್ದಾರೆ ಎಂದು ಮಂಡಳಿ ತಿಳಿಸಿದೆ. “ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ನನಗೆ ಹಲವು ದೂರುಗಳು ಬಂದಿದೆ ಮತ್ತು ನನಗೂ ಈ ಪ್ರಶ್ನೆ ಪತ್ರಿಕೆಯ ಪ್ರತಿ ಸಿಕ್ಕಿದೆ” ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಟ್ವೀಟ್ ಮಾಡಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗಿರುವ ಪ್ರಶ್ನೆ ಪತ್ರಿಕೆಯ ಪ್ಯಾಕೆಟ್‌ಗಳ ಸೀಲ್ ಹಾಗೆಯೇ ಇದೆ. ಹಾಗಾಗಿ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆಯೇ ಇಲ್ಲ ಎಂದು ಸಿಬಿಎಸ್‌ಇ ತಿಳಿಸಿದೆ. ಇಂಥ ವದಂತಿಗಳನ್ನು ಹರಡಿರುವ ವರ ವಿರುದ್ಧ ದೂರು ದಾಖಲಿಸಲು ಮಂಡಳಿಯು ನಿರ್ಧರಿಸಿದೆ. ಪತ್ರಿಕೆ ಸೋರಿಕೆಯ ಆರೋಪದ ತನಿಖೆ ನಡೆಸಲು ತಜ್ಞರ ತಂಡವನ್ನು ರಚಿಸುವುದಾಗಿ ಮಂಡಳಿ ತಿಳಿಸಿದೆ. ಮಾರ್ಚ್ ಐದರಿಂದ ಆರಂಭವಾಗಿರುವ ಮಂಡಳಿ ಪರೀಕ್ಷೆಗಳು ವಿವಾದದ ಮಧ್ಯೆಯೇ ನಡೆಯುತ್ತಿದೆ. ಆರಂಭದಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ವ್ಯವಹಾರ ಅಧ್ಯಯನಕ್ಕೆ ಸಂಬಂಧಪಟ್ಟ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಆರೋಪ ಕೇಳಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News