ಬೆಂಗಳೂರಿನಲ್ಲಿ ಐರ್ಲೆಂಡ್ ಮಾದರಿಯ ವಿಜ್ಞಾನ ಗ್ಯಾಲರಿ ಸ್ಥಾಪನೆ: ಎಂ.ಆರ್.ಸೀತಾರಾಂ

Update: 2018-03-15 13:15 GMT

ಬೆಂಗಳೂರು, ಮಾ.15: ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಪ್ರಸರಣ ಮತ್ತು ಕಲಿಕಾ ಸಂಸ್ಥೆಯಾದ ಐರ್ಲೆಂಡ್‌ನ ಅಂತಾರಾಷ್ಟ್ರೀಯ ವಿಜ್ಞಾನ ಗ್ಯಾಲರಿ(ಎಸ್‌ಜಿಐ) ಸಹಯೋಗದೊಂದಿಗೆ ಬೆಂಗಳೂರಿನಲ್ಲೂ ಅದೇ ಮಾದರಿಯ ವಿಜ್ಞಾನ ಗ್ಯಾಲರಿ ಸ್ಥಾಪಿಸಲು ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ವಿಶ್ವದಾದ್ಯಂತ ಸ್ಥಾಪಿಸಲಾಗುತ್ತಿರುವ 8 ವಿಜ್ಞಾನ ಗ್ಯಾಲರಿಗಳ ಜಾಲದಲ್ಲಿ ಐದನೆಯದಾಗಿದ್ದು, ಏಷ್ಯಾದಲ್ಲೆ ಪ್ರಥಮವಾಗಲಿದೆ ಎಂದರು.

ಒಟ್ಟು 30 ಕೋಟಿ ರೂ.ವೆಚ್ಚದಲ್ಲಿ ವಿಜ್ಞಾನ ಗ್ಯಾಲರಿಯ ಕಟ್ಟಡವನ್ನು ಈ ವರ್ಷ ಪ್ರಾರಂಭಿಸಲಾಗುತ್ತಿದ್ದು, ಈ ಗ್ಯಾಲರಿಯು ಹೊಚ್ಚ ಹೊಸ ವಿನೂತನ ಪ್ರಾತ್ಯಕ್ಷಿಕೆಗಳು ಹಾಗೂ ನಿರಂತರ ಬದಲಾಗುವ ವಿಜ್ಞಾನ, ತಂತ್ರಜ್ಞಾನ ಮತ್ತು ಕಲೆಯೊಂದಿಗೆ ಜೋಡಣೆಗೊಂಡಿರುವ ಕಾರ್ಯಕ್ರಮಗಳ ಮೂಲಕ ಯುವ ಜನರ ಕುತೂಹಲ ಮತ್ತು ಸ್ಫೂರ್ತಿ ತುಂಬುವಲ್ಲಿ ಅತ್ಯಂತ ಪ್ರಮುಖವಾಗಲಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯವನ್ನು 12 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಪ್ರೊಜೆಕ್ಷನ್ ವ್ಯವಸ್ಥೆಯನ್ನು(ಆಪ್ಟೋ ಮೆಕಾನಿಕಲ್ ಮತ್ತು 2ಡಿ ಡಿಜಿಟಲ್) ಅಳವಡಿಸಿ, ಉನ್ನತೀಕರಿಸಲಾಗಿದೆ ಎಂದು ಅವರು ತಿಳಿಸಿದರು.

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ದೇಶದಲ್ಲೆ ಅತ್ಯಾಧುನಿಕ 18 ಮೀಟರ್ ವ್ಯಾಸದ ಗೋಳವುಳ್ಳ, ಆಪ್ಟೋಮೆಕಾನಿಕಲ್ ಮತ್ತು ಆಕ್ಟಿವ್ 3ಡಿ, 8ಕೆ ರೆಸಲ್ಯೂಶನ್ ಡಿಜಿಟಲ್ ಹೈಬ್ರಿಡ್ ಪ್ರೊಜೆಕ್ಷನ್ ವ್ಯವಸ್ಥೆಯನ್ನೊಳಗೊಂಡ ತಾರಾಲಯವನ್ನು 37.50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲೂ ಮತ್ತೊಂದು ದೊಡ್ಡ ಮಟ್ಟದ 15 ಮೀಟರ್ ವ್ಯಾಸವುಳ್ಳ ಡೋಮ್ ಒಳಗೊಂಡ ಸುಸಜ್ಜಿತ 3ಡಿ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಂ ಹೊಂದಿರುವ ತಾರಾಲಯವನ್ನು 22 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಬಾಗಲಕೋಟೆ, ವಿಜಯಪುರ, ಗದಗ ಮತ್ತು ಮಡಿಕೇರಿಗಳಲ್ಲಿ ಮಿನಿ 3ಡಿ ಡಿಜಿಟಲ್ ತಾರಾಲಯಗಳನ್ನು(10 ಮೀ.ಡೋಮ್) ಪ್ರತಿ ಕೇಂದ್ರಕ್ಕೆ 5.75 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಒಂದು ಮಿನಿ 3ಡಿ ಡಿಜಿಟಲ್ ತಾರಾಲಯವನ್ನು ಬೆಳಗಾವಿ ನಗರದಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು 2018-19ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಖಗೋಳ ವಿಜ್ಞಾನ ಪ್ರದರ್ಶನವನ್ನು ಅವರ ಶಾಲೆಗಳಲ್ಲಿ ವೀಕ್ಷಿಸಲು ಅನುವಾಗುವಂತೆ ರಾಜ್ಯದ ಪ್ರತಿ ಆರು ಜಿಲ್ಲೆಗಳಿಗೆ ಒಂದರಂತೆ ಒಟ್ಟು 5 ಸಂಚಾರಿ ತಾರಾಲಯ ವಾಹನಗಳನ್ನು ನಿಯೋಜಿಸಲಾಗಿದೆ. ಈವರೆಗೆ 16 ಜಿಲ್ಲೆಗಳ 79 ತಾಲೂಕುಗಳಲ್ಲಿನ 480 ಪ್ರೌಢ ಶಾಲೆಗಳ ಒಟ್ಟು 1.52 ಲಕ್ಷ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸೀತಾರಾಂ ಹೇಳಿದರು.

ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ 7 ಹೊಸ ಸಂಚಾರಿ ತಾರಾಲಯಗಳನ್ನು ಖರೀದಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಚಿಂತನೆ, ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೆ 25 ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೆ ಎರಡು ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಮಂಗಳೂರು(ಪಿಲಿಕುಳ ನಿಸರ್ಗಧಾಮ) ಹಾಗೂ ಧಾರವಾಡ(ಕರ್ನಾಟಕ ವಿಶ್ವವಿದ್ಯಾಲಯ)ದಲ್ಲಿ ಸ್ಥಾಪಿಸಲಾಗಿದ್ದು, ಮತ್ತೊಂದು ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಮೈಸೂರಿನಲ್ಲಿ(ಮೈಸೂರು ವಿಶ್ವವಿದ್ಯಾಲಯ) ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ 14.50 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೀತಾರಾಂ ಹೇಳಿದರು.

ರಾಜ್ಯದ ಒಟ್ಟು 22 ಜಿಲ್ಲೆಗಳಲ್ಲಿ ತಲಾ 4 ರಿಂದ 6 ಕೋಟಿ ರೂ.ರಾಜ್ಯ ಸರಕಾರದ ಸಂಪೂರ್ಣ ಅನುದಾನದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, 7 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಅಭಿವೃದ್ಧಿಯ ಪ್ರಗತಿ ವಿವಿಧ ಹಂತಗಳಲ್ಲಿವೆ. ಉಳಿದ 13 ಕೇಂದ್ರಗಳ ಸ್ಥಾಪನೆಗೆ ಮುಂದಿನ ವರ್ಷಗಳಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News