ಪಿಎನ್‌ಬಿ ಹೊರತಾಗಿ ಯಾವುದೇ ಬ್ಯಾಂಕ್ ಅನಧಿಕೃತ ಎಲ್‌ಒಯು ನೀಡಿಲ್ಲ: ಎಸ್‌ಬಿಐ

Update: 2018-03-15 14:43 GMT

 ಹೊಸದಿಲ್ಲಿ, ಮಾ.15: ಸಾರ್ವಜನಿಕ ವಲಯದ ಎಲ್ಲ ಬ್ಯಾಂಕ್‌ಗಳು ತಾವು ನೀಡಿರುವ ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್ (ಎಲ್‌ಒಯು) ನ್ನು ಪರಿಶೀಲಿಸಿವೆ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ ನೀಡಿರುವ ಎಲ್‌ಒಯುಗಳ ಹೊರತಾಗಿ ಇತರ ಯಾವುದೇ ಬ್ಯಾಂಕ್‌ಗಳು ಅನಧಿಕೃತ ಎಲ್‌ಒಯುಗಳನ್ನು ನೀಡಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಕೆಲವು ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ಮೋಸದ ಎಲ್‌ಒಯುಗಳ ಮೂಲಕ ಪಿಎನ್‌ಬಿಗೆ 12,968 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಾರದ ಆರಂಭದಲ್ಲಿ ಆರ್‌ಬಿಐ ದೇಶದೊಳಗೆ ವಸ್ತುಗಳ ಆಮದಿಗಾಗಿ ಸಾಲ ಸೌಲಭ್ಯಕ್ಕಾಗಿ ಬ್ಯಾಂಕ್‌ಗಳು ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್ ನೀಡುವುದನ್ನು ಸ್ಥಗಿತಗೊಳಿಸಿತ್ತು. ಕಾರ್ಯಾಚರಣಾ ಮತ್ತು ತಾಂತ್ರಿಕ ಸಮಸ್ಯೆ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿ ಎಸ್ಬಿಐ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಎಲ್ಲ ಮುಖ್ಯ ತಾಂತ್ರಿಕ ಅಧಿಕಾರಿಗಳು ಮತ್ತು ಮುಖ್ಯ ಸಮಸ್ಯೆ ಪರಿಹಾರ ಅಧಿಕಾರಿಗಳು ಹಾಜರಿದ್ದರು ಎಂದು ಎಸ್ಬಿಐ ತಿಳಿಸಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಮುಂಬೈ ಶಾಖೆಯು ಮಾರ್ಚ್ 2011ರಿಂದ ನೀರವ್ ಮೋದಿಗೆ ಸೇರಿದ ಸಂಸ್ಥೆಗಳಿಗೆ ಮೋಸದಿಂದ 1,213 ಎಲ್‌ಒಯುಗಳನ್ನು ನೀಡಿತ್ತು. ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲೇ ಅತ್ಯಂತ ದೊಡ್ಡ ಹಗರಣ ಎಂದು ವ್ಯಾಖ್ಯಾನಿಸಲಾಗಿರುವ ಈ ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News