ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರ: ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ

Update: 2018-03-15 15:42 GMT

ಬೆಂಗಳೂರು, ಮಾ.15: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರ ಸಂಬಂಧ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ತಜ್ಞರ ವರದಿಯನ್ನು ಸಂಪುಟದಲ್ಲಿ ಮಂಡಿಸಲು ತಡೆಯಾಜ್ಞೆ ನೀಡುವುದಕ್ಕೆ ಹೈಕೋರ್ಟ್ ನಿರಾಕರಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಪ್ರಶ್ನಿಸಿ ಶಶಿಧರ್ ಶಾನುಭೋಗ ಎಂಬುವರು ಸೇರಿದಂತೆ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಲಿಂಗಾಯತ ಧರ್ಮಕ್ಕೆ ಸಂಬಂಧಪಟ್ಟ ತಜ್ಞರ ವರದಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು, ತಜ್ಞರ ಸಮಿತಿ ವರದಿಯನ್ನು ಸಂಪುಟದಲ್ಲಿ ಮಂಡಿಸಲು ಅವಕಾಶ ನೀಡಬಾರದು. ಮಂಡಿಸಿದಲ್ಲಿ ನಮ್ಮ ಅರ್ಜಿಯ ಉದ್ದೇಶವೇ ವ್ಯರ್ಥವಾಗಲಿದೆ. ಹೀಗಾಗಿ, ಸಂಪುಟದಲ್ಲಿ ಚರ್ಚಿಸಲು ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರ ಮನವಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನ್ಯಾಯಪೀಠ, ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಸರಕಾರದ ಯಾವುದೇ ನಿರ್ಧಾರ ಹೈಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದ್ದೇವೆ. ಎಷ್ಟು ಬಾರಿ ನಿಮಗೆ ನೆನಪಿಸಬೇಕು, ಆತಂಕ ಸರಿ, ಅತಿಯಾದ ಆತಂಕ ಯಾಕೆ ಎಂದು ನ್ಯಾಯಪೀಠ ಪ್ರಶ್ನಿಸಿತು.

ಇದೇ ವೇಳೆ ಅಲ್ಪಸಂಖ್ಯಾತ ಇಲಾಖೆಯ ಅಧೀನ ಕಾರ್ಯದರ್ಶಿ ಅಕ್ರಮ್ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದರು. ಲಿಂಗಾಯತರು ಹಿಂದೂಗಳಲ್ಲ, ಲಿಂಗಾಯತರು ಮೂರ್ತಿ ಪೂಜೆ ಮಾಡುವುದಿಲ್ಲ. ಬಸವಣ್ಣ ದೇಹವೇ ದೇಗುಲ ಎಂದು ಹೇಳಿದ್ದರು. ವೀರಶೈವರು ಬೇರೆ ಬೇರೆ ದೇವರನ್ನು ಆರಾಧಿಸುತ್ತಾರೆ. ಆದರೆ ಬಸವಣ್ಣನವರು ವೇದ ಮತ್ತು ಆಗಮಶಾಸ್ತ್ರದಿಂದ ದೂರವಿದ್ದರು. ಇಷ್ಟಲಿಂಗ ಪೂಜಿಸುವ ಧರ್ಮ ಒಂದೇ ಒಂದು ಅದು ಲಿಂಗಾಯತ ಧರ್ಮ. ಲಿಂಗಾಯತ ಧರ್ಮದಲ್ಲಿ ಯಾವುದೇ ಜಾತಿ ಭೇದ ಇಲ್ಲ. ಲಿಂಗಾಯತರಲ್ಲಿ ವಿಧವೆಯರ ಮದುವೆಗೆ ಅವಕಾಶವಿದೆ. ಹೀಗಾಗಿ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಬಹುದು ಎಂದು ಅಕ್ರಮ ಪ್ರಮಾಣಪತ್ರ ಸಲ್ಲಿಸಿದರು.

ಪ್ರಮಾಣ ಪತ್ರಕ್ಕೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದರು. ಲಿಂಗಾಯತರು ಹಿಂದೂಗಳಲ್ಲ ಎಂದು ಹೇಳಲು ಇವರಿಗೆ ಮಾಹಿತಿ ನೀಡಿದವರು ಯಾರು? ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳುವುದಕ್ಕಿಂತ ಮೊದಲೇ ಹೇಳಲು ಇವರಾರು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಆಶೋಕ ಹಾರನಹಳ್ಳಿ ಪ್ರಶ್ನಿಸಿದರು.

ಸರಕಾರದ ಆಕ್ಷೇಪಕ್ಕೆ ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲು ಮನವಿ ಮಾಡಿದರು. ಅರ್ಜಿದಾರರ ಪರ ವಕೀಲ ಆಶೋಕ ಹಾರನಹಳ್ಳಿ ಮನವಿ ಪುರಸ್ಕರಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿ, ವಿಚಾರಣೆಯನ್ನು ಎ.3ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News