ಬೆಂಗಳೂರು: ಸಿಐಟಿಯು ಕಾರ್ಮಿಕ ಪ್ರಣಾಳಿಕೆ ಬಿಡುಗಡೆ

Update: 2018-03-15 17:59 GMT

ಬೆಂಗಳೂರು,ಮಾ.15: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶ್ರಮ ಜೀವಿಗಳ ಪ್ರಶ್ನೆಗಳ ಬಗ್ಗೆ ನಿರ್ದಿಷ್ಟ ಧೋರಣೆಯನ್ನು ರೂಪಿಸುವ ಸಲುವಾಗಿ ಸಿಐಟಿಯು ಕಾರ್ಮಿಕ ವರ್ಗದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಂದಿನ ಜನಪ್ರತಿನಿಧಿಗಳ ಕುರಿತು ವೈಯಕ್ತಿಕ ಚರ್ಚೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಧಿಕ್ಕರಿಸುವ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದ್ದು, ದುಡಿಯುವ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದರು.

ಸಮೃದ್ಧ, ಸಮಗ್ರ, ಸೌಹಾರ್ದ ಕರ್ನಾಟಕ ರಾಜ್ಯದ ರಚನೆ ಕಾರ್ಮಿಕ ವರ್ಗದ ಪರವಾಗಿರಬೇಕು. ರಾಜ್ಯದ ಏಳಿಗೆಗಾಗಿ ದುಡಿಯುತ್ತಿರುವ ಶ್ರಮ ಜೀವಿಗಳ ಜೀವನುದ್ಧಾರದ ನೀತಿಗಳು ರಾಜಕೀಯ ಚರ್ಚೆಯ ವಿಚಾರವಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಮುಖ ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಅದನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಎಲ್ಲ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News