ಬಿಜೆಪಿಯ ಪಾಲಿಗೆ ಘೋರವಾದ ಗೋರಖ್‌ಪುರ ಫಲಿತಾಂಶ

Update: 2018-03-16 04:13 GMT

ಉತ್ತರ ಪ್ರದೇಶ ಮತ್ತು ಬಿಹಾರದ ಉಪಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳು ಮತ್ತು ಬಿಹಾರದ ಒಂದು ಲೋಕಸಭಾ ಕ್ಷೇತ್ರ ಬಿಜೆಪಿಯ ಕೈ ತಪ್ಪಿವೆ. ಉತ್ತರ ಪ್ರದೇಶದ ಎರಡು ಕ್ಷೇತ್ರಗಳೂ ಬಿಜೆಪಿಯ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಕ್ಷೇತ್ರಗಳಾಗಿದ್ದವು. ಒಂದು ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಗೋರಖ್‌ಪುರ ಮತ್ತು ಇನ್ನೊಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ವೌರ್ಯ ಪ್ರತಿನಿಧಿಸುತ್ತಿದ್ದ ಫೂಲ್‌ಪುರ ಕ್ಷೇತ್ರ. ಪರೋಕ್ಷವಾಗಿ ಈ ಕ್ಷೇತ್ರಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೇ ಪ್ರತಿನಿಧಿಸುವುದರಿಂದ ಇದರ ಸೋಲುಗೆಲುವಿನ ಪರಿಣಾಮ ಉತ್ತರ ಪ್ರದೇಶದ ಸರಕಾರದ ಮೇಲೆ ಸಹಜವಾಗಿ ಆಗುತ್ತದೆ. ಉತ್ತರ ಪ್ರದೇಶದ ಯೋಗಿಯನ್ನು ಮಾಧ್ಯಮಗಳ ಮೂಲಕ ಭ್ರಾಮಕವಾಗಿ ಕಟ್ಟಿಕೊಡುತ್ತಿದ್ದ ಪತ್ರಕರ್ತರಿಗೂ ಈ ಫಲಿತಾಂಶ ಭಾರೀ ಮುಖ ಭಂಗವನ್ನುಂಟು ಮಾಡಿದೆ.

ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರದ ಆಡಳಿತವನ್ನು ಜನರು ಈ ಮೂಲಕ ವಿಶ್ಲೇಷಿಸಿದ್ದಾರೆ. ಜೊತೆಗೆ ಯೋಗಿ ಆದಿತ್ಯನಾಥ್‌ರನ್ನು ಕರ್ನಾಟಕಕ್ಕೆ ತಂದು ಪ್ರಚಾರಕ್ಕೆ ಬಳಸಲು ಯತ್ನಿಸಿದ ರಾಜ್ಯ ಬಿಜೆಪಿ ನಾಯಕರ ಮುಖವೂ ಬಾಡಿದೆ. ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ತಾಲೀಮು ಎಂದು ಸ್ವತಃ ಮುಖ್ಯಮಂತ್ರಿ ಆದಿತ್ಯನಾಥ್ ಅವರೇ ಬಣ್ಣಿಸಿದ್ದರು. ಅವರ ಹೇಳಿಕೆ ಅವರಿಗೇ ತಿರುಗುಬಾಣವಾಗಿದೆ. ಈಗಾಗಲೇ ಗುಜರಾತ್ ರಾಜಸ್ಥಾನಗಳಲ್ಲಿ ಮುಖಭಂಗ ಅನುಭವಿಸಿರುವ ಬಿಜೆಪಿ, ಉತ್ತರ ಪ್ರದೇಶದ ಫಲಿತಾಂಶದಿಂದ ದಂಗಾಗಿ ಕುಳಿತಿದೆ.

ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದಾಗ ಅದನ್ನು ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸಿದ್ದರು. ಬಿಜೆಪಿ ಅಂದಿನ ಗೆಲುವನ್ನು ಸಂಪೂರ್ಣವಾಗಿ ಆರೆಸ್ಸೆಸ್ ಮತ್ತು ಉಗ್ರ ಹಿಂದುತ್ವಕ್ಕೆ ಅರ್ಪಿಸಿತ್ತು. ಅದರ ಭಾಗವಾಗಿಯೇ ಉಗ್ರ ಹಿಂದುತ್ವವಾದಿ ಮತ್ತು ಕ್ರಿಮಿನಲ್ ಹಿನ್ನೆಲೆಯಿರುವ ಸ್ವಯಂಘೋಷಿತ ಸನ್ಯಾಸಿ ಯೋಗಿ ಆದಿತ್ಯನಾಥ್‌ರನ್ನು ಮುಖ್ಯಮಂತ್ರಿಯನ್ನಾಗಿಸಿತು. ಇದೇ ಸಂದರ್ಭದಲ್ಲಿ ಬಿಎಸ್ಪಿ ತನ್ನ ಸೋಲಿನ ಸಂಪೂರ್ಣ ಭಾರವನ್ನು ಇವಿಎಂ ಮತಯಂತ್ರದ ಮೇಲೆ ಹಾಕಿ ಬಚಾವಾಗಲು ಹವಣಿಸಿತು. ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿದ್ದು ಇದರ ಪರಿಣಾಮವಾಗಿ ಬಿಎಸ್ಪಿಯ ಕ್ಷೇತ್ರಗಳನ್ನು ಬಿಜೆಪಿ ಮೋಸದಿಂದ ತನ್ನದಾಗಿಸಿಕೊಂಡಿತು ಎನ್ನುವ ಮೂಲಕ ಮಾಯಾವತಿ ಮುಖವುಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಇವಿಎಂ ಮತಯಂತ್ರ ದುರುಪಯೋಗವಾದ ಕುರಿತಂತೆ ಸಮಾಜವಾದಿ ಪಕ್ಷವೂ ಆರೋಪ ಮಾಡಿತ್ತಾದರೂ, ಆ ಬಗ್ಗೆ ಹೆಚ್ಚು ಚರ್ಚೆಗೆ ಇಳಿದಿರಲಿಲ್ಲ. ಈ ಬಾರಿಯೂ ಸಮಾಜವಾದಿ ಪಕ್ಷ ಇವಿಎಂ ದುರುಪಯೋಗದ ಬಗ್ಗೆ ಮಾತನಾಡಿದೆ. ಇವಿಎಂನ್ನು ದುರುಪಯೋಗ ಮಾಡದೇ ಇದ್ದಿದ್ದರೆ ಭಾರೀ ಅಂತರದ ಗೆಲವು ನಮ್ಮದಾಗುತ್ತಿತ್ತು ಎಂದು ಅಖಿಲೇಶ್ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಎರಡಾಗಿ ಒಡೆದಿತ್ತು. ತಂದೆ ಮಕ್ಕಳ ನಡುವೆ ಭಿನ್ನಾಭಿಪ್ರಾಯವಿತ್ತು. ಅಖಿಲೇಶ್ ನಾಯಕತ್ವದ ಕುರಿತಂತೆ ಎಸ್ಪಿಯೊಳಗೇ ಬಂಡಾಯವಿರುವಾಗ, ಅವರು ಉತ್ತರ ಪ್ರದೇಶದ ನಾಯಕರಾಗುವ ಮಾತಾದರೂ ಎಲ್ಲಿ ಬಂತು? ಈ ಬಂಡಾಯ ಮತ್ತು ಭಿನ್ನಮತವನ್ನು ಇಟ್ಟುಕೊಂಡೇ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿ ಚುನಾವಣೆಯನ್ನು ಎದುರಿಸಿದ್ದರು. ಅಂದರೆ ಮೊದಲು ತನ್ನ ಪಕ್ಷದೊಳಗಿನ ಹಿರಿಯ ಮುಖಂಡರನ್ನು ಎದುರಿಸಿ ಗೆದ್ದು, ಬಳಿಕ ವಿಧಾನಸಭೆಯನ್ನು ಗೆಲ್ಲುವಂತಹ ಸಂದಿಗ್ಧ ಸ್ಥಿತಿಯಲ್ಲಿ ಅಖಿಲೇಶ್ ಇದ್ದರು. ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿರಲಿಲ್ಲ. ಇತ್ತ ಮಾಯಾವತಿಯ ಬಿಎಸ್ಪಿ ಚುನಾವಣೆ ಹತ್ತಿರವಾಗುವವರೆಗೂ ಜನಸಾಮಾನ್ಯರಿಂದ ತೀರಾ ದೂರವಿತ್ತು. ಮುಝಪ್ಫರ್ ಗಲಭೆ, ದಲಿತರ ಮೇಲಿನ ಹಲ್ಲೆ, ಅಖ್ಲಾಕ್ ಹತ್ಯೆ, ಗೋರಕ್ಷಕರ ದಾಂಧಲೆ, ಲವ್ ಜಿಹಾದ್ ಹೆಸರಿನಲ್ಲಿ ಕೋಮುಗಲಭೆ ಈ ಎಲ್ಲ ಸಂದರ್ಭಗಳನ್ನು ರಾಜಕೀಯವಾಗಿ ತನಗೆ ಪೂರಕವಾಗಿಸಿಕೊಳ್ಳಲು ಮಾಯಾವತಿ ಸಂಪೂರ್ಣ ಸೋತಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬ್ರಾಹ್ಮಣರಿಗೂ, ಮುಸ್ಲಿಮರಿಗೂ ಅತ್ಯಧಿಕ ಟಿಕೆಟ್‌ಗಳನ್ನು ಕೊಟ್ಟು ಆ ಮೂಲಕ ಅಲ್ಪಸಂಖ್ಯಾತರ ಮತ್ತು ಮೇಲ್ಜಾತಿಯ ಮತಗಳನ್ನು ತನ್ನದಾಗಿಸಿಕೊಳ್ಳಬಹುದು ಎಂದು ಭಾವಿಸಿದರು. ಇದೇ ಸಂದರ್ಭದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಒಂದಾಗುವ ಸಾಧ್ಯತೆಗಳೇ ಇಲ್ಲವಾಯಿತು. ಜಾತ್ಯತೀತ ಮತಗಳು ಹರಿದು ಹಂಚಿ ಹೋದವು. ಪರಿಣಾಮವಾಗಿ ಬಿಜೆಪಿ ಸುಲಭವಾಗಿ ಗೆದ್ದು ಬಂತು.

ಕಳೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಇವಿಎಂ ದುರುಪಯೋಗವಾಗಿದೆಯೋ ಇಲ್ಲವೋ, ಆದರೆ ಜಾತ್ಯತೀತ ಮತಗಳು ವಿಭಜನೆಯಾಗದಂತೆ ತಡೆಯುವಲ್ಲಿ ಎಸ್ಪಿ ಮತ್ತು ಬಿಎಸ್ಪಿ ಸಂಪೂರ್ಣ ವಿಫಲವಾದವು. ಉತ್ತರ ಪ್ರದೇಶದ ಸೋಲು ಎಸ್ಪಿ ಮತ್ತು ಬಿಎಸ್ಪಿಯ ದುರಹಂಕಾರಕ್ಕೆ ನೀಡಲ್ಪಟ್ಟ ಪರಿಣಾಮಕಾರಿ ಔಷಧಿಯಾಗಿತ್ತು. ಆ ಔಷಧಿಯ ಸೇವನೆ ಅವರೆಡೂ ಪಕ್ಷಗಳ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಉಪಚುನಾವಣೆಯಲ್ಲಿ ಬಿಜೆಪಿಗಾಗಿರುವ ಮರ್ಮಾಘಾತ. ಈ ಬಾರಿ ಎಸ್ಪಿ ಮತ್ತು ಬಿಎಸ್ಪಿ ತಮ್ಮೆಲ್ಲ ಪ್ರತಿಷ್ಠೆಗಳನ್ನು ಬದಿಗಿಟ್ಟು ಒಂದಾದವು. ಜಾತ್ಯತೀತ ಶಕ್ತಿಗಳು ಒಂದಾದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಈ ಫಲಿತಾಂಶ ಹೇಳಿದೆ. ಅಷ್ಟೇ ಅಲ್ಲ, ಗೆಲುವನ್ನು ಸಂಭ್ರಮಿಸುತ್ತಲೇ ಎಸ್ಪಿ ನಾಯಕರು ಬಿಎಸ್ಪಿಗೆ ಅಭಿನಂದನೆ ಸಲ್ಲಿಸಿದ್ದಾರೆ. ‘‘ಈ ಯಶಸ್ಸಿನಲ್ಲಿ ಬಿಎಸ್ಪಿಯ ಪಾತ್ರ ದೊಡ್ಡದು’’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಈ ಹೇಳಿಕೆ ಭವಿಷ್ಯದಲ್ಲಿ ಎಸ್ಪಿ ಮತ್ತು ಬಿಎಸ್ಪಿ ನಡುವಿನ ಮೈತ್ರಿ ಮುಂದುವರಿಯಲಿರುವುದರ ಸೂಚನೆಯನ್ನು ನೀಡಿದೆ. ಈ ಮೈತ್ರಿ ಮುಂದುವರಿದದ್ದೇ ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇನ್ನಷ್ಟು ಮುಖಭಂಗಗಳಿಗೆ ಸಿದ್ಧವಾಗಬೇಕಾಗುತ್ತದೆ. ಸರಕಾರ ನಡೆಸುವುದೆಂದರೆ, ರಾಮಾಯಣ ಮ್ಯೂಸಿಯಂ, ಅಯೋಧ್ಯೆ, ಗೋಮೂತ್ರ, ಗೋ ಆ್ಯಂಬುಲೆನ್ಸ್, ಗೋಶಾಲೆ, ಗೋರಕ್ಷಕರು ಎಂದು ತಿಳಿದುಕೊಂಡು ಬೇಜವಾಬ್ದಾರಿಯ ಆಡಳಿತ ನೀಡುತ್ತಿರುವ ಆದಿತ್ಯನಾಥ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ಬಿದ್ದಿದೆ. ಗೋರಖ್ ಪುರದಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಿಂದ ಮೃತಪಟ್ಟ ನೂರಾರು ಕಂದಮ್ಮಗಳ ತಾಯಂದಿರ ಕಣ್ಣೀರು ಉಪಚುನಾವಣೆಯಲ್ಲಿ ಕೆಲಸ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭಾವನಾತ್ಮಕ ರಾಜಕೀಯದ ಮಿತಿಯನ್ನು ಈ ಫಲಿತಾಂಶ ಆದಿತ್ಯನಾಥ್‌ಗೆ ತಿಳಿಸಿ ಕೊಟ್ಟಿದೆ. ಇದನ್ನು ಅವರು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡು ಹೆಜ್ಜೆ ಮುಂದಿಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಆದಿತ್ಯನಾಥ್‌ಗೆ ಅದನ್ನು ಅರ್ಥೈಸಲು ಸಾಧ್ಯವಾಗದೇ ಇದ್ದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಎಯುದ್ದು ನಿಂತಷ್ಟೇ ವೇಗದಲ್ಲಿ ನೆಲಕಚ್ಚಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News