ಮುಂದುವರಿಯಲಿದೆ ​ಬಿಎಸ್ಪಿ- ಎಸ್ಪಿ ಮೈತ್ರಿ

Update: 2018-03-17 03:40 GMT

ಲಕ್ನೋ, ಮಾ.17: ಬಿಜೆಪಿಯನ್ನು ಮಣ್ಣುಮುಕ್ಕಿಸಿದ ಗೋರಖ್‌ಪುರ ಮತ್ತು ಫೂಲ್‌ಪುರ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಉತ್ತೇಜಿತವಾಗಿರುವ ಸಮಾಜವಾದಿ ಪಕ್ಷ- ಬಹುಜನ ಸಮಾಜ ಪಕ್ಷ ಮುಂದಿನ ಐದು ತಿಂಗಳೊಳಗೆ ನಡೆಯುವ ಕೈರಾನಾ ಲೋಕಸಭಾ ಕ್ಷೇತ್ರ ಮತ್ತು ನೂರ್‌ಪುರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸಲು ನಿರ್ಧರಿಸಿವೆ. ಬಿಜೆಪಿ ಸಂಸದ ಹುಕುಂ ಸಿಂಗ್ ಹಾಗೂ ಶಾಸಕ ಲೋಕೇಂದ್ರ ಸಿಂಗ್ ನಿಧನದಿಂದ ಈ ಸ್ಥಾನಗಳು ತೆರವಾಗಿವೆ.

ಈ ಉಪಚುನಾವಣೆಗಳ ಫಲಿತಾಂಶದ ಆಧಾರದಲ್ಲಿ 2019ರ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಂತಿಮ ನಿರ್ಧಾರವನ್ನು ಉಭಯ ಪಕ್ಷಗಳು ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಉಪಚುನಾವಣೆಗಳಲ್ಲಿ ಸ್ಪರ್ಧಿಸುವ ಸಂಪ್ರದಾಯ ಬಿಎಸ್ಪಿಯಲ್ಲಿಲ್ಲ. ಆದ್ದರಿಂದ ಫೂಲ್‌ಪುರ ಹಾಗೂ ಗೋರಖ್‌ಪುರ ಚುನಾವಣೆಗಳಲ್ಲಿ ಸ್ಪರ್ಧಿಸಿಲ್ಲ. ಅಂತೆಯೇ ಕೈರಾನಾ ಕ್ಷೇತ್ರದಲ್ಲಿ ಆಯ್ಕೆಯಾಗುವ ಸಂಸದನಿಗೆ ಕೂಡಾ ಕೆಲವೇ ತಿಂಗಳ ಅಧಿಕಾರಾವಧಿ ಇರುವ ಹಿನ್ನೆಲೆಯಲ್ಲಿ ಇಲ್ಲಿ ಮಾಯಾವತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇಲ್ಲ. ನೂರ್‌ಪುರ ಶಾಸಕನಿಗೆ ಮಾತ್ರ ಮೂರು ವರ್ಷಕ್ಕೂ ಅಧಿಕ ಅಧಿಕಾರಾವಧಿ ಸಿಗುತ್ತದೆ.

ಎಸ್ಪಿ ನೇತೃತ್ವದ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಬಿಎಸ್ಪಿ ಅಭ್ಯರ್ಥಿ ರಾಜ್ಯಸಭೆಗೆ ಆಯ್ಕೆಯಾದರೆ, ಮಾಯಾವತಿ ಕೈರಾನಾ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಗಳು ಅಧಿಕ ಎಂಬ ಚರ್ಚೆ ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕೈರಾನಾ ಹಾಗೂ ನೂರ್‌ಪುರ ಕಾರ್ಯತಂತ್ರದ ಬಗ್ಗೆ ನಿರ್ಧರಿಸುವ ಮೊದಲು ಮಾಯಾವತಿ, ರಾಜ್ಯಸಭಾ ಚುನಾವಣೆಯಲ್ಲಿ ಎಸ್ಪಿ ನೀಡುವ ಬೆಂಬಲವನ್ನು ಗಣನೆಗೆ ತೆಗೆದುಕೊಳ್ಳಲಿದ್ದಾರೆ ಎಂದು ಬಿಎಸ್ಪಿ ಮೂಲಗಳು ಹೇಳಿವೆ.

2009ರ ಚುನಾವಣೆವರೆಗೂ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ಭದ್ರಕೋಟೆಯಾಗಿದ್ದ ಕೈರಾನಾ ಕ್ಷೇತ್ರದಲ್ಲಿ, ಬಿಎಸ್ಪಿಯ ತಬಸುಮ್ ಬೇಗಂ ಅವರು ಹುಕುಂ ಸಿಂಗ್ ಅವರನ್ನು ಈ ಚುನಾವಣೆಯಲ್ಲಿ 20 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 2014ರಲ್ಲಿ ಮೋದಿ ಅಲೆಯಿಂದಾಗಿ 2.5 ಲಕ್ಷ ಮತಗಳ ಅಂತರದಲ್ಲಿ ಹುಕುಂ ಸಿಂಗ್ ಜಯ ಸಾಧಿಸಿದ್ದರು.

ಬಿಎಸ್ಪಿ ಬೆಂಬಲದೊಂದಿಗೆ ಈ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಹುಮ್ಮಸ್ಸು ಎಸ್ಪಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News