ಮಾಧ್ಯಮವನ್ನು ಗೋರಖಪುರ್ ಮತ ಎಣಿಕೆ ಕೇಂದ್ರದಿಂದ ದೂರವಿರಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದಿತ್ಯನಾಥ್ ಆಪ್ತ

Update: 2018-03-17 07:33 GMT

ಲಕ್ನೋ, ಮಾ.17: ಗೋರಖಪುರ್ ಲೋಕಸಭಾ ಉಪಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಮತದಾನ ಕೇಂದ್ರದಿಂದ ಪತ್ರಕರ್ತರನ್ನು ದೂರವಿರಿಸಲು ಪ್ರಯತ್ನಿಸಿ ವಿವಾದದ ಕೇಂದ್ರ ಬಿಂದುವಾಗಿದ್ದ ಗೋರಖಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲಾ ಅವರು ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸಮೀಪವರ್ತಿ ಎಂದು ತಿಳಿದು ಬಂದಿದೆ.

ರೌಟೇಲಾ ಅವರು ಪತ್ರಕರ್ತರನ್ನು ದೂರವಿಡಲು ಯತ್ನಿಸಿ ಮತ ಎಣಿಕೆ ವಿವರಗಳನ್ನು ಮರೆಮಾಚಲು ಯತ್ನಿಸಿದ್ದರು. ಈ ವಿಚಾರ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಪ್ರತಿಧ್ವನಿಗೊಂಡು ಪತ್ರಕರ್ತರೂ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಪತ್ರಕರ್ತರಿಗೆ ಮತ್ತೆ ಮತ ಎಣಿಕೆ ಮಾಹಿತಿ ನೀಡುವುದನ್ನು ಮುಂದುವರಿಸಲಾಗಿತ್ತು.

ಅಷ್ಟಕ್ಕೂ ರೌಟೇಲಾ ಹೀಗೇಕೆ ಮಾಡಿದ್ದರು ಎಂಬ ಪ್ರಶ್ನೆ ಇದ್ದೇ ಇದೆ. ಈ ಬಗ್ಗೆ ಪ್ರತಿಕ್ರಿಯಿರಿಸಿರುವ ಗೋರಖಪುರದ ಹಿರಿಯ ಪತ್ರಕರ್ತ ಮನೋಜ್ ಸಿಂಗ್, ‘‘ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಸಿಎಂ ಆದಿತ್ಯನಾಥ್ ಆವರ ಸಮೀಪವರ್ತಿ ಎಂಬುದು ಗುಟ್ಟಾಗಿ ಉಳಿದಿಲ್ಲ. ಅವರ ಉದ್ದೇಶವೇನೆಂಬುದು ನಾವು ಊಹೆ ಮಾಡಬೇಕಷ್ಟೇ. 1999ರಲ್ಲಿ ಆದಿತ್ಯನಾಥ್ ಕಡಿಮೆ ಮತಗಳ ಅಂತರದಿಂದ, ಅಂದರೆ 7,000 ಮತಗಳಿಂದ ಸೋತಿದ್ದಾಗ ಇಂತಹದ್ದೇ ಘಟನೆ ನಡೆದಿತ್ತು.

ಈ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದ ನಿಶದ್ ಅಭ್ಯರ್ಥಿ ಈಗಲೂ ಅಕ್ರಮ ನಡೆದಿರಬಹುದೆಂದು ಆರೋಪಿಸುತ್ತಾರೆ’’ ದಿ ವೈರ್ ಜತೆ ಮಾತನಾಡುತ್ತಾ ಹೇಳಿದರು.

‘‘2017ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ರೌಟೇಲಾ ಅವರನ್ನು ವಜಾಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಶಿಫಾರಸು ಮಾಡಿದ್ದರೂ ಈ ನಿಟ್ಟಿನಲ್ಲಿ ಸರಕಾರ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ ಎಂಬುದು ಅವರಿಗೆ ಸರಕಾರದ ಜತೆಗಿರುವ ಅವಿನಾಭಾವ ಸಂಬಂಧವನ್ನು ವಿವರಿಸುತ್ತದೆ. ಮುಖ್ಯ ಕಾರ್ಯದರ್ಶಿಗೆ ತನಿಖೆ ನಡೆಸುವಂತೆ ನ್ಯಾಯಾಲಯ ನಿರ್ದೇಶಿಸಿದ್ದರೂ ಸರಿಯಾದ ತನಿಖೆ ನಡೆದಿರಲಿಲ್ಲ’’ ಎಂದು ಸಿಂಗ್ ಹೇಳಿದರು.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಗೋರಖಪುರ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ 70 ಮಕ್ಕಳು ಮೃತಪಟ್ಟಾಗ ಅಲ್ಲಿನ ಜಿಲ್ಲಾಡಳಿತದತ್ತ ಹಲವರು ಬೊಟ್ಟು ಮಾಡಿದ್ದರು. ಆದರೂ ಜಿಲ್ಲಾಡಳಿತದ ಮುಖ್ಯಸ್ಥರಾಗಿದ್ದ ರೌಟೇಲಾ ಅವರನ್ನು ಯಾರೂ ಪ್ರಶ್ನಿಸಿರಲೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News