ರೊಹಿಂಗ್ಯಾ ನಿರಾಶ್ರಿತರ ವಿಷಯದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಬೇಡ: ಕೇಂದ್ರ

Update: 2018-03-17 13:26 GMT

ಹೊಸದಿಲ್ಲಿ,ಮಾ.17: ರೊಹಿಂಗ್ಯಾ ಮುಸ್ಲಿಮರ ಗಡಿಪಾರು ವಿಷಯದಲ್ಲಿ ಮಧ್ಯ ಪ್ರವೇಶಿಸದಂತೆ ಶುಕ್ರವಾರ ಸರ್ವೋಚ್ಚ ನ್ಯಾಯಾಲಯವನ್ನು ಕೇಳಿಕೊಂಡಿರುವ ಕೇಂದ್ರವು, ಈ ವಿಷಯದಲ್ಲಿ ಅದರ ಯಾವುದೇ ನಿರ್ದೇಶವು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲ ಎಂದು ತಿಳಿಸಿದೆ.

ಇತರ ದೇಶಗಳೊಂದಿಗಿನ ತನ್ನ ದುರ್ಬಲ ಗಡಿಗಳಿಂದಾಗಿ ದೇಶದಲ್ಲಿ ಭಯೋತ್ಪಾದನೆ ಹರಡಲು ಮೂಲಕಾರಣವಾಗಿರುವ ನುಸುಳುವಿಕೆಯ ಗಂಭೀರ ಸಮಸ್ಯೆಗಳನ್ನು ಭಾರತವು ಈಗಾಗಲೇ ಎದುರಿಸುತ್ತಿದ್ದು, ಭಯೋತ್ಪಾದನೆ ಪಿಡುಗು ಸಾವಿರಾರು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಗಳ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ತನ್ನ ಪ್ರಮಾಣಪತ್ರದಲ್ಲಿ ಕೇಂದ್ರವು ಹೇಳಿದೆ.

ಕಾನೂನಿಗನುಗುಣವಾಗಿ ಯಾವುದೇ ಸಾರ್ವಭೌಮ ರಾಷ್ಟ್ರದ ಗಡಿಗಳ ಭದ್ರತೆಯನ್ನು ಕಾಯ್ದುಕೊಳ್ಳುವುದು ಅಗತ್ಯ ಕರ್ತವ್ಯವಾಗಿದ್ದು, ಕೇಂದ್ರಕ್ಕೆ ಮಾತ್ರವಲ್ಲ, ವಿದೇಶಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿರುವ ಎಲ್ಲ ರಾಜ್ಯಗಳಿಗೂ ಸರ್ವೋಚ್ಚ ನ್ಯಾಯಾಲಯವು ಯಾವುದೇ ನಿರ್ದೇಶಗಳನ್ನು ನೀಡಕೂಡದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ನಿರಾಶ್ರಿತರ ಸ್ಥಾನಮಾನಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತವು ಸಹಿ ಹಾಕಿಲ್ಲ ಎನ್ನುವುದನ್ನು ಬೆಟ್ಟು ಮಾಡಿರುವ ಪ್ರಮಾಣಪತ್ರವು, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಮ್ಯಾನ್ಮಾರ್‌ಗಳೊಂದಿಗೆ ತನ್ನ ಭೂ ಗಡಿಗಳನ್ನು ಹಂಚಿಕೊಂಡಿರುವ ಭಾರತದ ವಿಶಿಷ್ಟ ಭೌಗೋಳಿಕ ಸ್ಥಿತಿಯನ್ನು ಪರಿಗಣಿಸಿದರೆ ನಿರಾಶ್ರಿತರ ಗಡಿಪಾರು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶವನ್ನು ನೀಡುವುದು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲ ಎಂದಿದೆ.

ವಿದೇಶಿಯರು ಅಕ್ರಮವಾಗಿ ಒಳನುಸುಳುವುದನ್ನು ತಡೆಯುವ ಮೂಲಕ ರಾಷ್ಟ್ರದ ಭದ್ರತೆಯನ್ನು ಕಾಯ್ದುಕೊಳ್ಳುವುದು ಮತ್ತು ಕಳ್ಳಸಾಗಾಣಿಕೆ ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ತಡೆಯುವುದು ಗಡಿ ಭದ್ರತಾ ಪಡೆ(ಬಿಎಸ್‌ಫ್)ನ ಕರ್ತವ್ಯವಾಗಿದೆ ಎಂದೂ ತಿಳಿಸಿರುವ ಕೇಂದ್ರವು, ನಿರಾಶ್ರಿತರು ಭಾರತದೊಳಗೆ ಪ್ರವೇಶಿಸುವುದನ್ನು ತಡೆಯಲು ಅದು ಮೆಣಸಿನ ಹುಡಿ ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ನಿರಾಕರಿಸಿದೆ. ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳನ್ನೂ ಅದು ತಳ್ಳಿಹಾಕಿದೆ.

ವಿವಿಧ ರಾಜ್ಯಗಳಲ್ಲಿ ಆಶ್ರಯ ಪಡೆದುಕೊಂಡಿರುವ ರೊಹಿಂಗ್ಯಾಗಳಿಗೆ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿರುವ ಕೇಂದ್ರವು, ನಿರಾಶ್ರಿತರಿಗೆ ಗುರುತಿನ ಚೀಟಿಗಳನ್ನು ನೀಡಲು ಯಾವುದೇ ಕಾನೂನನ್ನು ಸಂಸತ್ತು ಅಂಗೀಕರಿಸಿಲ್ಲವಾದ್ದರಿಂದ ಈ ಸೌಲಭ್ಯವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಶ್ರೀಲಂಕಾ ಮತ್ತು ರೋಹಿಂಗ್ಯಾ ನಿರಾಶ್ರಿತರ ಸಮಾನ ಪರಿಗಣನೆ ಕುರಿತಂತೆ ಕೇಂದ್ರವು, 1964ರ ಭಾರತ-ಸಿಲೋನ್ ಒಪ್ಪಂದಕ್ಕೆ ಅನುಗುಣವಾಗಿ ಶ್ರೀಲಂಕಾ ನಿರಾಶ್ರಿತರಿಗೆ ಕೆಲವು ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ, ಹೀಗಾಗಿ ಈ ಎರಡೂ ನಿರಾಶ್ರಿತರನ್ನು ಸಮಾನವಾಗಿ ಪರಿಗಣಿಸುವಂತಿಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News