ಅಭಯಚಂದ್ರ ಜೈನ್ ಬಹಿರಂಗ ಕ್ಷಮೆಗೆ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಆಗ್ರಹ

Update: 2018-03-17 13:28 GMT

ಬೆಂಗಳೂರು, ಮಾ.17: ಶ್ರೀ ಮುಕ್ತಾನಂದ ಸ್ವಾಮೀಜಿಯವನ್ನು ನಿಂದಿಸಿರುವ ಶಾಸಕ ಅಭಯಚಂದ್ರ ಜೈನ್ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ವೆಂಕಟರಮಣ, ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಮಠಾಧೀಶರಾದ ಮುಕ್ತಾನಂದ ಸ್ವಾಮಿಯನ್ನು ಏಕವಚನದಿಂದ ನಿಂದಿಸಿ, ಸರಕಾರಿ ಜಾಗವನ್ನು ಮಠಕ್ಕಾಗಿ ಒತ್ತುವರಿ ಮಾಡಿದ್ದಾರೆಂದು ಆರೋಪಿಸಿದ ಅವರು, ಇಂತಹ ಹೇಳಿಕೆ ಸರಿಯಲ್ಲ ಎಂದರು.

ಮುಕ್ತಾನಂದ ಸ್ವಾಮಿ ಪ್ರವಚನ ಸಂದರ್ಭದಲ್ಲಿ ಪುರಾಣಕಾಲದ ರಾಮ, ಕೃಷ್ಣ, ಕಂಸರ ಬಗ್ಗೆ ವಿವರಣೆ ನೀಡಿದ್ದಾರೆ. ಅವರು ಯಾರನ್ನು ನಿಂದಿಸಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಶಾಸಕ ಅಭಯಚಂದ್ರ ಜೈನ್ ಮುಕ್ತಾನಂದ ಸ್ವಾಮೀಜಿಗಳ ಮೇಲೆ ಅನಗತ್ಯ ಆರೋಪ ಮಾಡಿ ಅವರ ತೇಜೋವಧೆ ಮಾಡಿದ್ದಾರೆ. ಹೀಗಾಗಿ, ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮಾ.19ರಂದು ಮೂಡಬಿದಿರೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್.ವಿ, ಉಪಾಧ್ಯಕ್ಷ ಸಿ.ವೆಂಕಟಪ್ಪ, ಖಜಾಂಚಿ ಧನರಾಜ್, ನಗರ ಜಿಲ್ಲಾಧ್ಯಕ್ಷ ಮಹಲಿಂಯ್ಯ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News