ಸಂತ್ರಸ್ತೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿದ್ದಾಳೆಂದು ಹೇಳಬೇಕಾಗುತ್ತದೆ: ವಕೀಲ ಸಿ.ವಿ.ನಾಗೇಶ್

Update: 2018-03-17 13:31 GMT

ಬೆಂಗಳೂರು, ಮಾ.17: ಪ್ರಾಸಿಕ್ಯೂಷನ್ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂತ್ರಸ್ತೆಯು ಆರೋಪಿ ನಿತ್ಯಾನಂದ ಸ್ವಾಮೀಜಿ ಜೊತೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದೇ ಹೇಳಬೇಕಾಗುತ್ತದೆ ಎಂದು ನಿತ್ಯಾನಂದ ಸ್ವಾಮೀಜಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹೈಕೋರ್ಟ್‌ಗೆ ತಿಳಿಸಿದರು.

ಅತ್ಯಾಚಾರ ಆರೋಪದಲ್ಲಿ ದೋಷಮುಕ್ತ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿರುವ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ಮುಂದುವರಿಸಿದ ನಾಗೇಶ್, ಸಂತ್ರಸ್ತೆ ಮತ್ತು ಸಾಕ್ಷಿದಾರರೊಬ್ಬರ ನಡುವೆ ನಡೆದಿರುವ ಇಮೇಲ್ ಸಂಭಾಷಣೆಯನ್ನು ಗಮನಿಸಿದರೆ ಆಕೆಯ ಮೇಲೆ ಆಶ್ರಮದಲ್ಲಿ ಅತ್ಯಾಚಾರ ನಡೆದೇ ಇಲ್ಲ. ಆದರೆ, ಪ್ರಾಸಿಕ್ಯೂಷನ್ ಸಂಗ್ರಹಿಸಿರುವ ದಾಖಲೆಗಳನ್ನು ಗಮನಿಸಿದರೆ ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ ಎಂದೇ ಪರಿಗಣಿಸಬೇಕಾಗುತ್ತದೆ. ಹೀಗಿರುವಾಗ ಅತ್ಯಾಚಾರದ ಆರೋಪ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಪ್ರಾಸಿಕ್ಯೂಷನ್ ಪರ ಸಂದೇಶ್ ಜಿ. ಚೌಟ ವಾದ ಮಂಡಿಸಿ, ಪ್ರಕರಣದ ಹಂತಗಳನ್ನು ವಿವರಿಸಿದರು. ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು: ಭಕ್ತೆಯೊಬ್ಬರ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಐವರು ಶಿಷ್ಯರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ವಂಚನೆ, ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ, ಜೀವ ಬೆದರಿಕೆ ಮತ್ತು ಅಪರಾಧಿಕ ಒಳಸಂಚು ಆರೋಪ ಹೊರಿಸಲಾಗಿದೆ. ಈ ಸಂಬಂಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ.

ಈ ದೋಷಾರೋಪ ಪಟ್ಟಿ ಆಧರಿಸಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್, 2017ರ ಡಿಸೆಂಬರ್‌ನಲ್ಲಿ ರಾಮನಗರ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ವಿಚಾರಣೆ ನಡೆಸುತ್ತಿರುವ ಅಧೀನ ನ್ಯಾಯಾಲಯಕ್ಕೆ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಶಿಷ್ಯರು, ನಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಬೇಕು ಎಂದು ಕೋರಿದ್ದರು.

ಆದರೆ, ಸೆಷನ್ಸ್ ನ್ಯಾಯಾಲಯ ಈ ಅರ್ಜಿಯನ್ನು 2018 ಫೆಬ್ರುವರಿ 19ರಂದು ತಿರಸ್ಕರಿಸಿದೆ. ಈ ಆದೇಶ ರದ್ದುಗೊಳಿಸುವಂತೆ ಕೋರಿ ನಿತ್ಯಾನಂದ ಸ್ವಾಮೀಜಿ ಮತ್ತು ಶಿಷ್ಯರಾದ ಶಿವವಲ್ಲಭನೇನಿ, ರಾಗಿಣಿ ವಲ್ಲಭನೇನಿ, ಧನಶೇಖರ ಮತ್ತು ಜಮುನಾ ರಾಣಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News