ಮೆಟ್ರೊ ಆಡಳಿತ ಮಂಡಳಿ-ನೌಕರರ ಸಂಧಾನ ಸಭೆ ವಿಫಲ: ಮಾ.19ಕ್ಕೆ ಮತ್ತೊಂದು ಸುತ್ತಿನ ಮಾತುಕತೆ

Update: 2018-03-17 13:37 GMT

ಬೆಂಗಳೂರು, ಮಾ.17: ಬೆಂಗಳೂರು ಮೆಟ್ರೊ ರೈಲು ನಿಗಮದ(ಬಿಎಂಆರ್‌ಸಿಎಲ್) ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವೆ ಕಾರ್ಮಿಕ ನ್ಯಾಯಾಲಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಈ ಸಂಬಂಧ ಮಾ.19ರಂದು ಮತ್ತೊಂದು ಸುತ್ತಿನ ಸಭೆ ಕರೆಯಲಾಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಾ.22ರಂದು ಮುಷ್ಕರ ನಡೆಸಲು ನಿಗಮದ ಸಿಬ್ಬಂದಿ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಮುಷ್ಕರ ನಡೆಸದಂತೆ ಮನವೊಲಿಸಲು ಸಭೆ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ಮೆಟ್ರೊ ಕಾರ್ಮಿಕರಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗದ ಕಾರಣ ಸಭೆ ವಿಫಲಗೊಂಡಿದೆ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದರು.

ನಿರ್ಣಯ ಕೈಗೊಳ್ಳುವ ಅಧಿಕಾರಿಗಳು ಸಂಧಾನ ಸಭೆಗೆ ಬರುತ್ತಿಲ್ಲ. ಹೀಗಾಗಿ ಸಭೆ ವಿಫಲವಾಗುತ್ತಿದೆ. ಮುಂದಿನ ಸಭೆಗೆ ನಿಗಮದ ಉನ್ನತ ಅಧಿಕಾರಿಗಳು ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಬೇಕು. ಇಲ್ಲವಾದರೆ, ಮುಷ್ಕರ ನಡೆಸುವುದು ನಿಶ್ಚಿತವೆಂದು ಅವರು ಎಚ್ಚರಿಕೆ ನೀಡಿದರು.

ಭದ್ರತೆಗೆ ಮನವಿ: ಮುಷ್ಕರದ ವೇಳೆ ಪ್ರತಿಭಟನಾಕಾರರು ಮೆಟ್ರೊ ನಿಲ್ದಾಣಗಳಿಗೆ ನುಗ್ಗಿ ದಾಂಧಲೆ, ರೈಲು ನಿಲುಗಡೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಹೀಗಾಗಿ ನಿಲ್ದಾಣಗಳಲ್ಲಿ ಮುಷ್ಕರದ ದಿನ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದು ಮೆಟ್ರೊ ನಿಲ್ದಾಣಗಳ ಸಹಾಯಕ ಭದ್ರತಾ ಅಧಿಕಾರಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಪತ್ರ ಬರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಮೆಟ್ರೊ ಅಧಿಕಾರಿಯೊಬ್ಬರು ತಿಳಿಸಿದರು.

ಬೇಡಿಕೆಗಳು
-ಬಿಎಂಆರ್‌ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ
-ಗುತ್ತಿಗೆ ಕಾರ್ಮಿಕ ಪದ್ಧತಿ ಕೈಬಿಟ್ಟು ನೌಕರರನ್ನು ಖಾಯಂಗೊಳಿಸುವುದು
-ನೌಕರರ ಎಲ್ಲ ಕುಂದುಕೊರತೆ ಬಗೆಹರಿಸಬೇಕು.
-ಅನುಭವಕ್ಕೆ ತಕ್ಕಂತೆ ವೇತನ ಪರಿಷ್ಕರಣೆ
-ರಾತ್ರಿ ಪಾಳಿಗೆ ಹೆಚ್ಚುವರಿ ವೇತನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News