ಭ್ರಷ್ಟ ಅಭ್ಯರ್ಥಿಯ ಆಯ್ಕೆ ಬದಲು ನೋಟಾ ಬಳಸಿ: ನ್ಯಾ.ಸಂತೋಷ್ ಹೆಗ್ಡೆ

Update: 2018-03-17 14:23 GMT

ಬೆಂಗಳೂರು, ಮಾ.17: ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಸೂಕ್ತವಲ್ಲ ಎಂಬುದು ಮನವರಿಕೆಯಾದರೆ ಮತದಾರರು ನಿರ್ಭೀತಿಯಿಂದ ನೋಟಾ ಬಳಸುವ ಮೂಲಕ ಭ್ರಷ್ಟ ಅಭ್ಯರ್ಥಿಗಳ ಆಯ್ಕೆಯನ್ನು ತಿರಸ್ಕರಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದರು.

ಶನಿವಾರ ಬೆಂಗಳೂರು ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ವೈದ್ಯಕೀಯ ರಾಯಭಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಗೆಲ್ಲುವುದೊಂದನ್ನೆ ಪ್ರಮುಖ ಉದ್ದೇಶವನ್ನಾಗಿಸಿಕೊಂಡಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತ ಮಿತಿಮೀರಿ ಬೆಳೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಎನ್ನುವುದು ಯಾವುದೆ ಒಂದು ಸಮಾಜಕ್ಕೆ ಸೀಮಿತವಾದುದ್ದಲ್ಲ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರಜಾಪ್ರಭುತ್ವದ ಹಕ್ಕಿದೆ. ಕೆಲವು ನಿರ್ದಿಷ್ಟ ಸಮುದಾಯಗಳು ಪ್ರಜಾಪ್ರಭುತ್ವ ನಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸುತ್ತಿವೆ. ಇಂತಹ ಸಮುದಾಯಕ್ಕೆ ಪ್ರಜ್ಞಾವಂತ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಅವರು ಆಶಿಸಿದರು.

ಲೋಕಸಭಾ ಕಲಾಪಗಳಿಗೆ ಪ್ರತಿನಿತ್ಯ ಸುಮಾರು 10 ಕೋಟಿ ರೂ.ವೆಚ್ಚವಾಗುತ್ತಿದೆ. ಆದರೆ, ಲೋಕಸಭೆಯಲ್ಲಿ ಪ್ರಯೋಜನಕಾರಿಯಾದ ಚರ್ಚೆಗಳು ಹಾಗೂ ಜನಪರ ಯೋಜನೆಗಳು ಜಾರಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

ಜನಪ್ರತಿನಿಧಿಗಳು ತಾವು ಮಾಡುತ್ತಿರುವ ಭ್ರಷ್ಟಾಚಾರವನ್ನು ಮುಚ್ಚಿಟ್ಟು ಅಧಿಕಾರಿಗಳ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ರಕ್ಷಕರೆ ಭಕ್ಷಕರಾದರೆ ಜನತೆಯನ್ನು ಕಾಪಾಡುವವರು ಯಾರು. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಜನಪ್ರತಿನಿಧಿಗಳ ಮೌಲ್ಯಯುತ ಬದುಕು, ನಿಸ್ವಾರ್ಥ, ತ್ಯಾಗದ ಜೀವನ ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದರು.

ಈ ವೇಳೆ ಡಾ.ಎಸ್.ಕುಮಾರ್, ಡಾ.ಸತೀಶ್, ಪ್ರೊ.ಟಿ.ಎಸ್.ರಂಗನಾಥ್, ಡಾ.ಶೆಭಾ ಶ್ರೀನಾಥ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News