ಜಾತ್ಯತೀತ ಚಿಂತನೆ ಸಹಿಸದವರೇ ಕಲ್ಬುರ್ಗಿ- ಗೌರಿ ಹತ್ಯೆಗೈದಿದ್ದು: ಕೆ.ನೀಲಾ

Update: 2018-03-17 15:23 GMT

ಬೆಂಗಳೂರು, ಮಾ.17: ಜಾತ್ಯತೀತವಾಗಿ ಬದುಕಬೇಕೆಂದು ಚಿಂತಕ ಎಂ.ಎಂ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹೇಳಿರುವುದನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಹತ್ಯೆಗೈದರು ಎಂದು ಚಿಂತಕಿ ಕೆ.ನೀಲಾ ಆಪಾದಿಸಿದ್ದಾರೆ.

ಶನಿವಾರ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆಯಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಹನ್ನೆರಡನೆಯ ಶತಮಾನದ ಬಸವಣ್ಣನವರು ಜಾತಿ ಹೋಗಲಾಡಿಸುವುದಕ್ಕಾಗಿ ಅನುಭವ ಮಂಟಪವನ್ನು ಕಟ್ಟಿದರು. ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಅವರು ಅವರ ಚಿಂತನೆಗಳನ್ನು ಮುಂದುವರೆಸಲು ಮುಂದಾದರು. ಆದರೆ, ಇದನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಹತ್ಯೆಗೈದರು ಎಂದು ಆಪಾದಿಸಿದರು.

ಉತ್ತರ ಕರ್ನಾಟಕ ಸೂಫಿ ಸಂತರ ನಾಡಾಗಿದ್ದು, ಅಲ್ಲಿಯ ಜನರು ಹಿಂದು, ಮುಸ್ಲಿಂ, ಕೈಸ್ತ ಎಂಬ ಯಾವುದೆ ಭೇದ ಭಾವವಿಲ್ಲದೆ ಇವತ್ತಿಗೂ ಬದುಕುತ್ತಿದ್ದಾರೆ. ಆದರೆ, ಇದನ್ನು ಸಹಿಸದ ಮೂಲಭೂತವಾದಿಗಳು ರಾಜಕೀಯ ಲಾಭಕ್ಕಾಗಿ, ಆಸ್ತಿ ಲೂಟಿ ಮಾಡುವುದಕ್ಕಾಗಿ ಹಿಂದುಗಳು ಬೇರೆ, ಮುಸ್ಲಿಮರು ಬೇರೆ ಎನ್ನುವ ಬೀಜವನ್ನು ಬಿತ್ತುತ್ತಿದ್ದು, ಇದರಿಂದ, ಆ ಭಾಗದಲ್ಲೂ ಕೋಮುವಾದ ಚಿಗುರು ಒಡೆಯುತ್ತಿದೆ ಎಂದು ಕಿಡಿಕಾರಿದರು.
   
ಮನುಸ್ಮತಿಯ ಚಿಂತನೆಗಳು ಮಹಿಳೆಯರ ವಿರೋಧಿಯಾಗಿದ್ದು, ಮಹಿಳೆಯರ ಅರ್ಧ ಶಕ್ತಿಯನ್ನೇ ಕುಂದಿಸಿತು. ಆದರೆ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಲೆನಿನ್‌ನಂತಹ ಮಹಾನ್ ನಾಯಕರು ಬಂದ ಮೇಲೆ ಮನುಸ್ಮತಿಯಿಂದ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ, ಅನಿಷ್ಟಗಳಿಗೆ ಕಡಿವಾಣ ಬಿದ್ದಿತು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವಾಗ ಮೂಲಭೂತ ಹಕ್ಕುಗಳ ಮಾನ್ಯತೆಯನ್ನು ಜಾರಿಗೆ ತಂದು ಎಲ್ಲರಿಗೂ ಅನುಕೂಲ ಮಾಡಿಕೊಟ್ಟರು. ಅದೇ ರೀತಿಯಾಗಿ ಮೂಲಭೂತ ಹಕ್ಕಿನಲ್ಲಿ ನಿರುದ್ಯೋಗವನ್ನು ಹೋಗಲಾಡಿಸಲು ಹಾಗೂ ಶ್ರಮಿಕ ವರ್ಗಕ್ಕೆ ಅನುಕೂಲ ಮಾಡಿಕೊಡಲು ಉದ್ಯೋಗದ ಹಕ್ಕನ್ನು ನೀಡಬೇಕಾಗಿತ್ತು ಎಂದು ಹೇಳಿದರು.

ಮಹಿಳೆಯರಿಗೆ ಹೆಚ್ಚಿನ ಮೀಸಲಾತಿಯನ್ನು ನೀಡಿದರೆ ವಿಜ್ಞಾನ ಕ್ಷೇತ್ರ, ಶಿಕ್ಷಣ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆಗಳನ್ನು ಮಾಡುತ್ತಾರೆ. ಹೀಗಾಗಿ, ಲೆನಿನ್ ಹೇಳಿದಂತೆ ಅಡುಗೆ ಮಾಡುವುದನ್ನು ಉದ್ಯಮವಾಗಿ ಬೆಳೆಸಿ ಮಹಿಳೆಯರ ಸಾಧನೆಗೆ ಪ್ರೋತ್ಸಾಹಿಸಬೇಕೆಂದು ಹೇಳಿದರು.

ನನ್ನ ಊರು ಬಸವಕಲ್ಯಾಣವಾಗಿದ್ದು, ನನ್ನ ತಂದೆ ಹೋರಾಟದ ಹಿನ್ನೆಲೆಯಲ್ಲಿ ಬಂದವರು. ಹಾಗೂ ನನ್ನ ಪತಿ ಬಿ.ಎನ್.ಕೋದಂಡರಾಮಪ್ಪ ಅವರು ಬಳ್ಳಾರಿ ಜಿಲ್ಲೆಯವರಾಗಿದ್ದು, ಎಸ್‌ಎಫ್‌ಐನಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News