ಮೈನಸ್ 90 ಡಿಗ್ರಿ ಸೆಲ್ಸಿಯಸ್‌ ಕೊರೆಯುವ ಚಳಿಯಿರುವ ಅಂಟಾರ್ಟಿಕಾದಲ್ಲಿ 403 ದಿನ ಕಳೆದ ಇಸ್ರೋ ಮಹಿಳಾ ವಿಜ್ಞಾನಿ

Update: 2018-03-18 04:25 GMT

ಹೊಸದಿಲ್ಲಿ, ಮಾ.18: ಮೈಕೊರೆಯುವ ಚಳಿ, ಹಿಂದೆಂದೂ ಕಂಡು ಕೇಳರಿಯದಷ್ಟು ಹಿಮಪಾತ, ಮಂಜುಗಡ್ಡೆಯ ರಾಶಿಯ ಮೇಲೆ ಕಿಲೋಗಟ್ಟಲೆ ಸಾಮಗ್ರಿಗಳನ್ನು ಹೊತ್ತುಕೊಂಡು 403 ದಿನಗಳನ್ನು ಕಳೆದಿರುವ ಈ ಇಸ್ರೋ ಮಹಿಳಾ ವಿಜ್ಞಾನಿ, ನಾರಿಶಕ್ತಿಯ ಜೀವಂತ ನಿದರ್ಶನ.

ವಿಶ್ವದ ಅತ್ಯಂತ ಶೀತ ಪ್ರದೇಶ ಎನಿಸಿದ ಅಂಟಾರ್ಟಿಕಾದಲ್ಲಿ ಈ ಸಾಹಸ ಮೆರೆದ ವಿಜ್ಞಾನಿ ಮಂಗಳಾ ಮಣಿ. ಇಲ್ಲಿ ಉಷ್ಣತೆ ಮೈನಸ್ 90 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುತ್ತದೆ. 2016ರ ನವೆಂಬರ್‌ನಲ್ಲಿ ಈ ಹಿಮಖಂಡಕ್ಕೆ ಯಾನ ಕೈಗೊಂಡ 23 ಮಂದಿಯ ತಂಡದಲ್ಲಿ 56 ವರ್ಷದ ಮಂಗಳಾ ಮಣಿ ಸೇರಿದ್ದರು. ಭಾರತದ ಸಂಶೋಧನಾ ಕೇಂದ್ರವಾದ ಇಸ್ರೋದಲ್ಲಿ ಸಂಶೋಧನೆ ಕೈಗೊಂಡಿರುವ ಇಡೀ ತಂಡದಲ್ಲಿರುವ ಏಕೈಕ ಮಹಿಳೆ ಇವರು.

ಕಳೆದ ಡಿಸೆಂಬರ್‌ನಲ್ಲಿ ಯಶಸ್ವಿ ಮಿಷನ್ ಪೂರ್ಣಗೊಳಿಸಿದ ಮಂಗಳಾ ’ಟೈಮ್ಸ್ ಆಫ್ ಇಂಡಿಯಾ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಅಂಟಾರ್ಟಿಕ ಮಿಷನ್ ನಿಜವಾಗಿಯೂ ಸವಾಲಿನದ್ದಾಗಿತ್ತು. ಅಲ್ಲಿ ಹವಾಮಾನ ತೀರಾ ಕಠಿಣ. ಹವಾಮಾನ ನಿಯಂತ್ರಿತ ಸಂಶೋಧನಾ ಕೇಂದ್ರದಿಂದ ಹೊರಹೋಗಬೇಕಾದರೆ ತೀರಾ ಎಚ್ಚರ ವಹಿಸಬೇಕಾಗುತ್ತಿತ್ತು. ಧ್ರುವ ಉಡುಪು ಧರಿಸಿಕೊಳ್ಳಬೇಕಿತ್ತು. ಮೈಕೊರೆಯುವ ಚಳಿಯಲ್ಲಿ 2-3 ಗಂಟೆ ಕಳೆಯುವುದು ಕೂಡಾ ಕಷ್ಟಕರ. ತಕ್ಷಣ ದೇಹ ಬಿಸಿ ಮಾಡಿಕೊಳ್ಳಲು ವಾಪಸ್ಸಾಗಬೇಕಿತ್ತು" ಎಂದು ಬಣ್ಣಿಸಿದರು.

"ನಮ್ಮ ತಂಡದ ಸದಸ್ಯರು ಅತ್ಯಂತ ಸಹಕಾರಿಯಾಗಿದ್ದರು. ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿದ್ದೆವು. ನಮ್ಮ ತಂಡದ ಸದಸ್ಯರು, ನನ್ನ ಹುಟ್ಟುಹಬ್ಬವನ್ನು ಈ ಭೂಕೇಂದ್ರದಲ್ಲೇ ಆಚರಿಸಿದರು. ಎಲ್ಲೂ ಯಾವ ಸಮಸ್ಯೆಯಾಗಲಿಲ್ಲ" ಎಂದು 2016-17ರ ತಂಡದಲ್ಲಿದ್ದ ಏಕೈಕ ಮಹಿಳೆಯಾದ ಅವರು ಸಂತೋಷ ಹಂಚಿಕೊಂಡರು.

ಕಠಿಣ ಸಂಶೋಧನಾ ಕಾರ್ಯಗಳಿಗೆ ಆಯ್ಕೆಯಾಗುವ ಮುನ್ನ ಈ ತಂಡದ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಹಲವು ವಾರಗಳ ಕಾಲ ಪರೀಕ್ಷೆ ನಡೆದಿತ್ತು. ಎಐಐಎಂಎಸ್‌ನಲ್ಲಿ ಹಲವು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಉತ್ತರಾಖಂಡದ ಚಮೋಲಿ ಜಿಲ್ಲೆಯ ಔಲಿ ಮತ್ತು 10 ಸಾವಿರ ಅಡಿ ಎತ್ತದ ಬದರಿನಾಥ್‌ನಲ್ಲಿ ಮಂಜುಗಡ್ಡೆಯಲ್ಲಿ ಸಾಗುವ ತರಬೇತಿಯನ್ನು ಎರಡು ವಾರಗಳ ಕಾಲ ನೀಡಲಾಗಿತ್ತು. ದೈಹಿಕ ಕ್ಷಮತೆ ಪರೀಕ್ಷೆಗಾಗಿ ಭಾರ ಹೊತ್ತುಕೊಂಡು ಚಾರಣಕ್ಕೆ ಸೂಚಿಸಲಾಗಿತ್ತು ಎಂದು ಅನುಭವ ಹಂಚಿಕೊಂಡರು.

ಒಂದು ವರ್ಷದ ಅವಧಿಗೆ ಬೇಕಾಗುವ ಆಹಾರ ಮತ್ತು ಇಂಧನ ಪೂರೈಸಲು ಬೇಸಿಗೆಯಲ್ಲಿ ಹಡಗುಗಳು ಇಲ್ಲಿಗೆ ಆಗಮಿಸುತ್ತವೆ. ಎಲ್ಲ ತ್ಯಾಜ್ಯಗಳನ್ನು ಪ್ಯಾಕ್ ಮಾಡಿ ಅದರಲ್ಲಿ ವಾಪಸ್ ಕಳುಹಿಸುತ್ತೇವೆ. ಈ ಮೂಲಕ ಕೇಂದ್ರವನ್ನು ಸಂಪೂರ್ಣ ಸ್ವಚ್ಛವಾಗಿ ಇಡುತ್ತಿದ್ದೆವು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News