ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಕೇಂದ್ರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿಗೆ ಮಠಾಧೀಶರ ಆಗ್ರಹ

Update: 2018-03-18 14:12 GMT

ಬೆಂಗಳೂರು, ಮಾ.18: ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕೆಂದು ಲಿಂಗಾಯತ ಮಠಾಧೀಶರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಗ್ರಹಿಸಿದೆ.

ರವಿವಾರ ಗೃಹ ಕಚೇರಿ ಕೃಷ್ಣಾ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಲಿಂಗಾಯತ ಮಠಾಧೀಶರ ನಿಯೋಗವು ಈ ಸಂಬಂಧ ಚರ್ಚೆ ನಡೆಸಿತು.

ನ್ಯಾ. ನಾಗಮೋಹನ್ ದಾಸ್ ನೀಡಿದ ವರದಿ ಬಗ್ಗೆ ನಾಳಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇತ್ತಿಚೇಗೆ ತಮ್ಮನ್ನು ಭೇಟಿ ಮಾಡಿದ್ದ ವೀರಶೈವ ಮಠಾಧೀಶರ ಮನವಿಯನ್ನು ತಿರಸ್ಕರಿಸಬೇಕೆಂದು ಅವರು ಮನವಿ ಮಾಡಿದರು.

ವಿಧಾನಸಭೆ ಚುನಾವಣೆಗೂ ಮುನ್ನ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ವಿರೋಧಿಸುವ ಸಚಿವರನ್ನು ನೀವೇ ನಿಯಂತ್ರಿಸಬೇಕು ಎಂದು ಮಠಾಧೀಶರ ನಿಯೋಗ ಮನವಿ ಮಾಡಿತು.

ನಿಯೋಗದಲ್ಲಿ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News