ಪೂರ್ವ ಘೌಟಾದ ಶಾಲೆಯ ಮೇಲೆ ಮಿಸೈಲ್ ದಾಳಿ: 15 ಮಕ್ಕಳು ಮೃತ್ಯು

Update: 2018-03-20 17:06 GMT

ಬೈರೂತ್, ಮಾ. 20: ಸಿರಿಯದ ಪೂರ್ವ ಘೌಟದಲ್ಲಿರುವ ಶಾಲೆಯೊಂದರ ಮೇಲೆ ನಡೆದ ವಾಯು ದಾಳಿಯಲ್ಲಿ 15 ಮಕ್ಕಳು ಮೃತಪಟ್ಟಿದ್ದಾರೆ. ಇದೇ ದಾಳಿಯಲ್ಲಿ, ಬಾಂಬ್‌ಗಳಿಂದ ರಕ್ಷಿಸಿಕೊಳ್ಳಲು ಶಾಲೆಯ ತಳ ಅಂತಸ್ತಿನಲ್ಲಿ ಆಶ್ರಯ ಪಡೆದುಕೊಂಡಿದ್ದ ಇಬ್ಬರು ಮಹಿಳೆಯರೂ ಪ್ರಾಣ ಕಳೆದುಕೊಂಡಿದ್ದಾರೆ.

  ಬಂಡುಕೋರರ ನಿಯಂತ್ರಣದಲ್ಲಿರುವ ಘೌಟದ ಪ್ರಮುಖ ಪಟ್ಟಣ ಅರ್ಬಿನ್‌ನಲ್ಲಿ ಈ ದಾಳಿ ನಡೆದಿದೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ. ಈ ಪ್ರದೇಶದ ಮೇಲೆ ಸಿರಿಯದ ಸರಕಾರಿ ಪಡೆಗಳು ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯಿಂದ ನಿರಂತರ ಬಾಂಬ್ ದಾಳಿಗಳನ್ನು ನಡೆಸುತ್ತಿವೆ.

‘‘ಒಂದೇ ದಾಳಿಯಲ್ಲಿ 3 ಕ್ಷಿಪಣಿಗಳು ಶಾಲೆಯ ಮೇಲೆ ಬಡಿದವು. ಈ ಶಾಲೆಯನ್ನು ಬಾಂಬ್ ದಾಳಿಗಳಿಂದ ರಕ್ಷಿಸಿಕೊಳ್ಳಲು ಭೂಗತ ಬಂಕರ್‌ನಂತೆ ಬಳಸಿಕೊಳ್ಳಲಾಗುತ್ತಿತ್ತು’’ ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹಮಾನ್ ಹೇಳಿದ್ದಾರೆ.

ಸೋಮವಾರ ರಾತ್ರಿ ನಡೆದ ವಾಯು ದಾಳಿಯನ್ನು ರಶ್ಯದ ಯುದ್ಧ ವಿಮಾನಗಳು ನಡೆಸಿರುವ ಸಾಧ್ಯತೆಗಳಿವೆ ಎಂದರು.

ಬಂಡುಕೋರರ ಭದ್ರಕೋಟೆಯ 80 ಶೇಕಡ ಭಾಗವನ್ನು ಸರಕಾರಿ ಪಡೆಗಳು ಈಗಾಗಲೇ ತಮ್ಮ ಕೈವಶಪಡಿಸಿಕೊಂಡಿವೆ.

ಪೂರ್ವ ಘೌಟದಿಂದ 79,702 ನಾಗರಿಕರ ತೆರವು

ಸಿರಿಯದ ಮುತ್ತಿಗೆಗೊಳಗಾಗಿರುವ ಪೂರ್ವ ಘೌಟ ಜಿಲ್ಲೆಯಿಂದ ಈವರೆಗೆ 79,702 ಮಂದಿ ನಾಗರಿಕರನ್ನು ತೆರವುಗೊಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ. ಈ ಪೈಕಿ ಹೆಚ್ಚಿನವರು ಮಕ್ಕಳು.

ಸೋಮವಾರ, 6,046 ನಾಗರಿಕರು ಮಾನವೀಯ ಕಾರಿಡಾರ್‌ಗಳ ಮೂಲಕ ಜಿಲ್ಲೆಯಿಂದ ಹೊರನಡೆದರು ಎಂದು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಅದು ಹೇಳಿದೆ.

ಇಸ್ಲಾಮಿಕ್ ಸ್ಟೇಟ್ ದಾಳಿಯಲ್ಲಿ 36 ಸೈನಿಕರು ಸಾವು

ಸಿರಿಯದ ರಾಜಧಾನಿ ಡಮಾಸ್ಕಸ್‌ನ ಜಿಲ್ಲೆಯೊಂದರ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ರಾತ್ರೋರಾತ್ರಿ ದಾಳಿ ನಡೆಸಿ ಆ ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಈ ದಾಳಿಯಲ್ಲಿ ಸಿರಿಯದ 36 ಸೈನಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಮಂಗಳವಾರ ಹೇಳಿದೆ.

‘‘ಕದಮ್ ಜಿಲ್ಲೆಯ ಪೂರ್ಣ ನಿಯಂತ್ರಣವನ್ನು ಇಸ್ಲಾಮಿಕ್ ಸ್ಟೇಟ್ ಪಡೆದಿದೆ. ಈ ಕಾಳಗದಲ್ಲಿ 36 ಸರಕಾರಿ ಹಾಗೂ ಸರಕಾರಕ್ಕೆ ನಿಷ್ಠೆ ಹೊಂದಿರುವ ಸೈನಿಕರು ಮೃತಪಟ್ಟಿದ್ದಾರೆ’’ ಎಂದು ಲಂಡನ್‌ನಲ್ಲಿ ನೆಲೆ ಹೊಂದಿರುವ ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News