ಮುಂದುವರಿದ ಗದ್ದಲ: ಉಭಯ ಸದನಗಳೂ ಮುಂದೂಡಿಕೆ

Update: 2018-03-20 16:55 GMT

ಹೊಸದಿಲ್ಲಿ, ಮಾ.20: ಸಂಸತ್‌ನ ಉಭಯ ಸದನಗಳ ಕಲಾಪವನ್ನು ಸತತ 12ನೇ ದಿನವೂ ಮುಂದೂಡಲಾಗಿದ್ದು ಗದ್ದಲದ ಕಾರಣ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ಎತ್ತಿಕೊಳ್ಳಲು ಸ್ಪೀಕರ್ ನಿರಾಕರಿಸಿದ್ದಾರೆ. ಇರಾಕ್‌ನಲ್ಲಿ ಅಪಹೃತಗೊಂಡು ಬಳಿಕ ಹತರಾಗಿದ್ದ 39 ಭಾರತೀಯರಿಗೆ ರಾಜ್ಯಸಭೆಯಲ್ಲಿ ಸದಸ್ಯರು ಶೃದ್ಧಾಂಜಲಿ ಸಲ್ಲಿಸಿದರು. ಬಳಿಕ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪಕ್ಷಗಳು ಪ್ರತಿಭಟನೆಗೆ ಮುಂದಾದಾಗ ಸತತ 12ನೇ ದಿನವೂ ಸದನ ಗದ್ದಲದಲ್ಲಿ ಮುಳುಗಿತು. ಬಳಿಕ ಎರಡೂ ಸದನದ ಕಲಾಪವನ್ನು ಮುಂದೂಡಲಾಯಿತು.

ಇರಾಕ್‌ನಲ್ಲಿ ಮೃತಪಟ್ಟ 39 ಭಾರತೀಯರ ಕುರಿತು ವಿದೇಶ ವ್ಯವಹಾರ ಇಲಾಖೆಯ ಸಚಿವೆ ಸುಷ್ಮಾಸ್ವರಾಜ್ ಹೇಳಿಕೆ ನೀಡುತ್ತಿರುವಂತೆ ಗದ್ದಲ ಆರಂಭವಾಯಿತು. ಗದ್ದಲದ ಮಧ್ಯೆಯೇ ಅಕ್ರಮ ಚಿಟ್ ಫಂಡ್ ಯೋಜನೆಗಳನ್ನು ನಿಷೇಧಿಸುವ ಮಸೂದೆಯನ್ನು ಮಂಡಿಸಲಾಯಿತು. ಸದನದಲ್ಲಿ ಗದ್ದಲದ ವಾತಾವರಣ ಇರುವ ಕಾರಣ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ಸ್ವೀಕರಿಸಲು ಆಗದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿ ಮಧ್ಯಾಹ್ನದ ವರೆಗೆ ಕಲಾಪವನ್ನು ಮುಂದೂಡಿದರು. ಈ ವೇಳೆ ವಿರೋಧ ಪಕ್ಷದ ಸದಸ್ಯರು ಏರು ಧ್ವನಿಯಲ್ಲಿ ಘೋಷಣೆ ಕೂಗಿದರು. ಮಧ್ಯಾಹ್ನ ಸದನ ಮರು ಸಮಾವೇಶಗೊಂಡಾಗ ಕಲಾಪಪಟ್ಟಿಯಲ್ಲಿ ಇರುವ ಪೇಪರ್‌ಗಳನ್ನು ಮಂಡಿಸುವಂತೆ ಸ್ಪೀಕರ್ ಆದೇಶಿಸಿದರು. ಆದರೆ ಈ ಹಂತದಲ್ಲಿ ಎಐಎಡಿಎಂಕೆ ಮತ್ತು ಟಿಡಿಪಿ ಸದಸ್ಯರು ಸದನದ ಬಾವಿಗೆ ನುಗ್ಗಿ ತಮ್ಮ ಬೇಡಿಕೆಗಳ ಬಗ್ಗೆ ಜೋರಾಗಿ ಘೋಷಣೆ ಕೂಗತೊಡಗಿದರು. ಆದರೆ ಇದಕ್ಕೆ ಆಕ್ಷೇಪ ಸೂಚಿಸಿದ ಕಾಂಗ್ರೆಸ್ ಸದಸ್ಯರು, ಹೀಗೆ ಮಾಡಿದರೆ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಬರಲು ಅಡ್ಡಿಯಾಗುತ್ತದೆ ಎಂದರು. ಶಾಂತಿ ಕಾಪಾಡುವಂತೆ ಸದಸ್ಯರನ್ನು ಕೋರಿದ ಸ್ಪೀಕರ್, ವಿದೇಶಾಂಗ ಸಚಿವರು ಗಂಭೀರವಾದ ವಿಷಯದ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎಂದರು. ಆದರೆ ಇದಕ್ಕೆ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಸದಸ್ಯರು ಒಪ್ಪದೆ ಹೇಳಿಕೆ ಬೇಡ ಎಂದು ಘೋಷಣೆ ಕೂಗಿದರು.

 ಗದ್ದಲದ ಮಧ್ಯೆಯೇ ಹೇಳಿಕೆ ನೀಡಿದ ಸಚಿವೆ ಸ್ವರಾಜ್, ಮೃತಪಟ್ಟ ವ್ಯಕ್ತಿಗಳ ಡಿಎನ್‌ಎ ನಾಪತ್ತೆಯಾಗಿದ್ದ ವ್ಯಕ್ತಿಗಳ ಡಿಎನ್‌ಎಗೆ ಶೇ.100ರಷ್ಟು ಸರಿಯಾಗಿದೆ ಎಂದು ಹೇಳಿದರು. ಈ ಹಂತದಲ್ಲಿ ಕಾಂಗ್ರೆಸ್, ‘ಆಪ್’ ಸದಸ್ಯರು ಘೋಷಣೆ ತೀವ್ರಗೊಳಿಸಿದಾಗ ಸದಸ್ಯರ ವರ್ತನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಸ್ಪೀಕರ್, ಸಂಸದರು ದೇಶದ ಜನರ ಬಗ್ಗೆ ಸಂವೇದನೆ, ಸಹಾನುಭೂತಿಯನ್ನೇ ಹೊಂದಿಲ್ಲವೇ ಎಂದು ಪ್ರಶ್ನಿಸಿದರು. ಇಂತಹ ವಿಷಯದಲ್ಲೂ ರಾಜಕೀಯ ಮಾಡಬೇಡಿ. ಈ ಹಿಂದೆ ಈ ರೀತಿಯ ಘಟನೆ ನಡೆದಿಲ್ಲ ಎಂದು ಸ್ಪೀಕರ್ ಹೇಳಿದರು. ಸುಷ್ಮಾ ಸ್ವರಾಜ್ ತಮ್ಮ ಹೇಳಿಕೆ ಮುಗಿಸಿ ಆಸೀನರಾದ ಬಳಿಕ ಮಾತನಾಡಿದ ಸ್ಪೀಕರ್, ಅವಿಶ್ವಾಸ ನಿರ್ಣಯ ಗೊತ್ತುವಳಿಯನ್ನು ಚರ್ಚೆಗೆ ಎತ್ತಿಕೊಳ್ಳುವುದು ತನ್ನ ಕರ್ತವ್ಯವಾಗಿದೆ. ಆದರೆ ಸದನದಲ್ಲಿ ಇರುವ ಪರಿಸ್ಥಿತಿ ಇದಕ್ಕೆ ಪೂರಕವಾಗಿಲ್ಲ ಎಂದರು. ಈ ಹಂತದಲ್ಲಿ ಎಐಎಡಿಎಂಕೆ ಹಾಗೂ ಟಿಡಿಪಿ ಸದಸ್ಯರು ಮತ್ತೆ ಘೋಷಣೆ ಕೂಗಲಾರಂಭಿಸಿದರು. ಈ ಹಂತದಲ್ಲಿ ಸ್ಪೀಕರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ಅವಿಶ್ವಾಸ ಗೊತ್ತುವಳಿ ಮಂಡಿಸಬೇಕಿದ್ದರೆ ಕನಿಷ್ಟ 50 ಸದಸ್ಯರ ಬೆಂಬಲ ಬೇಕು. ಆದರೆ ಸದನದಲ್ಲಿ ಹಲವಾರು ಸದಸ್ಯರು ಎದ್ದುನಿಂತು ಗದ್ದಲ ನಡೆಸುತ್ತಿರುವ ಕಾರಣ ಸದಸ್ಯರ ತಲೆ ಎಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಲೋಕಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

 ರಾಜ್ಯಸಭೆಯಲ್ಲಿ ಕಲಾಪ ಆರಂಭವಾದ ಅರ್ಧ ಗಂಟೆಯ ಬಳಿಕ ಕಲಾಪ ಮುಂದೂಡಲಾಯಿತು. ಇರಾಕ್‌ನಲ್ಲಿ ಮೃತಪಟ್ಟ ಭಾರತೀಯರ ಬಗ್ಗೆ ಸಚಿವೆ ಸ್ವರಾಜ್ ಸ್ವಯಂಪ್ರೇರಿತ ಹೇಳಿಕೆ ನೀಡಿದರು. ಸಹಾಯಕ ವಿದೇಶ ವ್ಯವಹಾರ ಸಚಿವ ವಿ.ಕೆ.ಸಿಂಗ್ ವಿಶೇಷ ವಿಮಾನದಲ್ಲಿ ಇರಾಕ್‌ಗೆ ತೆರಳಿ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲಿದ್ದಾರೆ ಎಂದು ಹೇಳಿದರು. ಬಳಿಕ ಸದನದ ಸದಸ್ಯರು ಮೌನವಾಗಿ ಎದ್ದು ನಿಂತು ಶೃದ್ಧಾಂಜಲಿ ಸಲ್ಲಿಸಿದರು. ಸಾವಿನ ಬಗ್ಗೆ ತೀವ್ರ ಸಂತಾಪ ಸೂಚಿಸಿದ ವಿಪಕ್ಷ ನಾಯಕ ಗುಲಾಂನಬಿ ಆಝಾದ್, ಅಪಹೃತ ಭಾರತೀಯರನ್ನು ಜೀವಂತವಾಗಿ ಕರೆತರಲಾಗುತ್ತದೆ ಎಂದು ಕಳೆದ ವರ್ಷ ಸರಕಾರ ಭರವಸೆ ನೀಡಿತ್ತು ಎಂದು ನೆನಪಿಸಿದರು. ಈ ಹಂತದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ಸಂಸದರು ಗದ್ದಲ ಆರಂಭಿಸಿದಾಗ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡುವುದಾಗಿ ಘೋಷಿಸಿದರು.

ಆದರೆ ಇದಕ್ಕೆ ಆಝಾದ್ ತೀವ್ರ ಆಕ್ಷೇಪ ಸೂಚಿಸಿದರು. ಬ್ಯಾಂಕಿಂಗ್ ವಂಚನೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದ್ದು ಇದಕ್ಕೆ ಪೂರಕವಾದ ವಾತಾವರಣ ರೂಪಿಸಲು ಪ್ರಯತ್ನಿಸುವ ಬದಲು ಸರಕಾರ ಕಲಾಪ ಮುಂದೂಡಿ ಪಲಾಯನವಾದಕ್ಕೆ ಮೊರೆ ಹೋಗಿದೆ ಎಂದವರು ಟೀಕಿಸಿದರು. ಆದರೆ ಡಿಎಂಕೆ, ಎಐಎಡಿಎಂಕೆ, ಟಿಡಿಪಿ ಸದಸ್ಯರು ಸದನದ ಬಾವಿಗೆ ನುಗ್ಗಿ ಘೋಷಣೆ ಮುಂದುವರಿಸಿದರು. ಸರಕಾರ ಯಾವುದೇ ಚರ್ಚೆಗೆ ಸಿದ್ಧವಿದೆ ಎಂದು ಕಾನೂನು ಸಚಿವ ರವಿಶಂಕರ್‌ಪ್ರಸಾದ್ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿಜಯ್ ಗೋಯೆಲ್ ಹೇಳಿದರು. ಆದರೆ ಗದ್ದಲ ಮುಂದುವರಿದಾಗ ವೆಂಕಯ್ಯ ನಾಯ್ಡು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News