ಸಿಆರ್ ಪಿಎಫ್‍ಗೆ 100 ಗುಂಡು ನಿರೋಧಕ ವಾಹನ

Update: 2018-03-21 04:23 GMT

ಹೊಸದಿಲ್ಲಿ, ಮಾ. 21: ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತು ನಕ್ಸಲ್‍ಪೀಡಿತ ರಾಜ್ಯದಲ್ಲಿ ಎಡಪಂಥೀಯ ಉಗ್ರ ಸಂಗಟನೆಗಳು ಭದ್ರತಾ ಸಿಬ್ಬಂದಿಯನ್ನು ಗುರಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ 141 ಮಧ್ಯಮ ಪ್ರಮಾಣದ ಗುಂಡುನಿರೋಧಕ ವಾಹನಗಳನ್ನು ಸರ್ಕಾರ ಖರೀದಿಸಿದೆ. ಕೇಂದ್ರೀಯ ಅರೆಮಿಲಿಟರಿ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ಸ್ಥಳಕ್ಕೆ ಸುರಕ್ಷಿತವಾಗಿ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

141 ವಾಹನಗಳ ಪೈಕಿ 100 ವಾಹನಗಳನ್ನು ಕೇಂದ್ರೀಯ ಪೊಲೀಸ್ ಮೀಸಲು ಪಡೆ (ಸಿಆರ್ ಪಿಎಫ್‍)ಗೆ ಒದಗಿಸಲಾಗುತ್ತದೆ. ಈ ಮೂಲಕ ಸಿಆರ್ ಪಿಎಫ್‍ ಸಿಬ್ಬಂದಿ ಕಾನುನು ಮತ್ತು ಸುವ್ಯವಸ್ಥೆ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಹೆದ್ದಾರಿಗಳಲ್ಲಿ ದಾಳಿಯ ಭಯವಿಲ್ಲದೇ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲು ಕೂಡಾ ಇದು ಸಹಕಾರಿಯಾಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

20 ವಾಹನಗಳನ್ನು ಇಂಡೋ ಟಿಬೇಟಿಯನ್ ಗಡಿ ಪೊಲೀಸರು, 15ನ್ನು ಸಶಸ್ತ್ರ ಸೀಮಾ ಬಲ ಮತ್ತು ಆರನ್ನು ಸಿಐಎಸ್‍ಎಫ್ ಜಮ್ಮು ಕಾಶ್ಮೀರ ಬೆಟಾಲಿಯನ್‍ಗೆ ನೀಡಲಾಗುತ್ತಿದೆ. ಸರ್ಕಾರ ಇದಕ್ಕಾಗಿ ಈಗಾಗಲೇ 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಇವುಗಳನ್ನು ಸದ್ಯವೇ ಸೇವೆಗೆ ನಿಯೋಜಿಸಲಾಗುತ್ತದೆ. 20 ವಾಹನಗಳು ಎರಡು ತಿಂಗಳಲ್ಲಿ ಸೇವೆಗೆ ಲಭ್ಯವಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಣ್ಣ ಹಾಗೂ ಎಕೆ ಸರಣಿಯ ಶಸ್ತ್ರಾಸ್ತ್ರಗಳಿಂದ ಹೊಡೆಯುವ ಗುಂಡನ್ನು ತಡೆಯಲು ಇದು ಸಮರ್ಥವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News