ಜೆಎನ್‍ಯು ಸೇರಿ 10 ವಿವಿಗಳಿಗೆ ಹೆಚ್ಚು ಸ್ವಾಯತ್ತತೆ

Update: 2018-03-21 05:12 GMT

ಹೊಸದಿಲ್ಲಿ,ಮಾ.21: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ಹೈದರಾಬಾದ್ ವಿವಿ ಮತ್ತು ಜಾಧವಪುರ ವಿವಿ ಸೇರಿದಂತೆ ದೇಶದ 10 ವಿಶ್ವವಿದ್ಯಾನಿಲಯಗಳಿಗೆ ಅಧಿಕ ಸ್ವಾಯತ್ತತೆ ನೀಡಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರಕಟಿಸಿದ್ದಾರೆ.

ಈ ವಿಶ್ವವಿದ್ಯಾನಿಲಯಗಳು ಹೊಸ ಕೋರ್ಸ್ ಆರಂಭಿಸಲು, ತಮ್ಮದೇ ಪಠ್ಯಕ್ರಮವನ್ನು ಹೊಂದಲು ಮತ್ತು ವಿದೇಶಿ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಐದು ಕೇಂದ್ರೀಯ ವಿಶ್ವವಿದ್ಯಾನಿಲಯಗಳು 21 ರಾಜ್ಯ ವಿಶ್ವವಿದ್ಯಾನಿಲಯಗಳು 24 ಸ್ವಾಯತ್ತ ವಿಶ್ವವಿದ್ಯಾನಿಲಯಗಳು ಹಾಗೂ ಎರಡು ಖಾಸಗಿ ವಿವಿಗಳನ್ನು ಪಟ್ಟಿ ಮಾಡಲಾಗಿದ್ದು, ಸರ್ಕಾರದ ಹೊಸ ಯೊಜನೆಯ ಸೌಲಭ್ಯವನ್ನು ಈ ವಿಶ್ವವಿದ್ಯಾನಿಲಯಗಳು ಪಡೆಯಲಿವೆ. ಈ ವಿಶ್ವವಿದ್ಯಾನಿಲಯಗಳು ಯುಜಿಪಿ ವ್ಯಾಪ್ತಿಯಲ್ಲೇ ಉಳಿದರೂ, ಹೊಸ ಕೋರ್ಸ್‍ಗಳನ್ನು ಆರಂಭಿಸಲು ಇವುಗಳಿಗೆ ಸ್ವಾತಂತ್ರ್ಯ ಇರುತ್ತದೆ. ಇತರ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಲು, ಕೌಶಲ ಅಭಿವೃದ್ಧಿ ಕೇಂದ್ರ, ಸಂಶೋಧನಾ ಪಾರ್ಕ್ ಮತ್ತು ಹೊಸ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಶ್ವವಿದ್ಯಾನಿಲಯಗಳು ವಿದೇಶಿ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು, ವಿದೇಶಿ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳಲು, ಸಿಬ್ಬಂದಿಗೆ ಪ್ರೋತ್ಸಾಹಕ ಸೌಲಭ್ಯ ನೀಡಲು ಹಾಗೂ ವಿದೇಶಿ ವಿವಿಗಳ ಜತೆ ಸಹಭಾಗಿತ್ವ ಹೊಂದಲು ಮತ್ತು ಮುಕ್ತ ವಿವಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಆದರೆ ದೆಹಲಿ ವಿವಿಯ ನ್ಯಾಕ್ ಮಾನ್ಯತಾ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇದಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ ಎನ್ನಲಾಗಿದೆ. ಗುಣಮಟ್ಟವಿಲ್ಲದ ಹಲವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದೂ ಸಚಿವರು ಈ ಸಂದರ್ಭದಲ್ಲಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News