ಯುವಜನತೆ ಮೊಬೈಲನ್ನು ಎಚ್ಚರಿಕೆಯಿಂದ ಬಳಸಲಿ: ನಾಗಲಕ್ಷ್ಮಿ ಬಾಯಿ

Update: 2018-03-21 18:42 GMT

ಬೆಂಗಳೂರು, ಮಾ.21: ರಾಜ್ಯ ಮಹಿಳಾ ಆಯೋಗಕ್ಕೆ ಬರುತ್ತಿರುವ ಶೇ.80ರಷ್ಟು ದೂರಿನ ಪ್ರಕರಣಗಳು ಮೊಬೈಲ್ ಪ್ರೇಮ ಪ್ರಕರಣಗಳೆ ಆಗಿವೆ. ಹೀಗಾಗಿ ಯುವ ಜನತೆ ಮೊಬೈಲನ್ನು ಜಾಗ್ರತೆಯಿಂದ ಬಳಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ತಿಳಿಸಿದರು.

ಬುಧವಾರ ಮಲ್ಲೇಶ್ವರಂನ ಲೇಡಿಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ ನಗರದ ರುಕ್ಕಮ್ಮ ರಾಘವಾಚಾರ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ: ದೃಷ್ಟಿಕೋನಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜೀವನದಲ್ಲಿ ಮೊಬೈಲ್ ಅನಿವಾರ್ಯವಾಗಿದೆ. ಇದರಿಂದ ಹಲವು ರೀತಿಯ ಉಪಯೋಗಗಳನ್ನು ಪಡೆಯಬಹುದು. ಆದರೆ, ನಮ್ಮ ಯುವ ಜನತೆ ಉಪಯೋಗಕ್ಕಿಂತ ದುರುಪಯೋಗ ಮಾಡಿಕೊಳ್ಳುವುದೆ ಹೆಚ್ಚಾಗಿದೆ. ಮೊಬೈಲ್‌ನಿಂದ ಅಪರಿಚಿತರೊಂದಿಗೆ ಸಂಬಂಧ ಬೆಳೆಸಿಕೊಂಡು ಸಮಸ್ಯೆಗೆ ಈಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇವತ್ತಿನ ಆಧುನಿಕ ಜೀವನದಲ್ಲಿ ವಿದ್ಯೆ ಎಲ್ಲರಿಗೂ ಸಿಗುತ್ತಿರುವುದು ಸಂತೋಷದ ಸಂಗತಿಯೆ. ಆದರೆ, ವಿದ್ಯೆ ಜೊತೆಗೆ ಬುದ್ಧಿ ಬೆಳೆಸಿಕೊಳ್ಳುತ್ತಿಲ್ಲ. ಸಣ್ಣ-ಪುಟ್ಟ ವಿಷಯಗಳಿಗೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಎಂಜಿನಿಯರಿಂಗ್, ವೈದ್ಯ ಪದವಿ ಪಡೆದರೆ ಹೊಟ್ಟೆ ತುಂಬಬಹುದಷ್ಟೆ. ಆದರೆ, ಜೀವನದ ಮೌಲ್ಯಗಳು ಬರಬೇಕಾದರೆ ಬುದ್ಧಿವಂತಿಕೆ ಬೆಳೆಸಿಕೊಳ್ಳುವುದು ಅಗತ್ಯವೆಂದು ಅವರು ಆಶಿಸಿದರು.

ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಷನ್ ಉಪಾಧ್ಯಕ್ಷೆ ಶೈಲಜಾ ಶ್ರೀನಿವಾಸ್ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬೇರೆಯವರನ್ನು ನಿರೀಕ್ಷಿಸುವುದು ತಪ್ಪು. ನಿರ್ದಿಷ್ಟ ಗುರಿ, ಅಚಲ ವಿಶ್ವಾಸ ಹಾಗೂ ಕಠಿಣ ಪರಿಶ್ರಮದೊಂದಿಗೆ ನಮ್ಮೆಲ್ಲ ಸಮಸ್ಯೆಗಳನ್ನು ಮೀರಿ ಯಶಸ್ಸಿನತ್ತ ಸಾಗಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಣಿಪಾಲ್ ಫರ್ಟಿಲಿಟಿ ವಿಭಾಗದ ಮುಖ್ಯಸ್ಥೆ ಸಿಬಿತಾ, ‘ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ’ ವಿಷಯದ ಕುರಿತು ಮಾತನಾಡಿದರು. ಈ ವೇಳೆ ಬೃಂದಾ ಅಡಿಗ, ಅನ್ನಪೂರ್ಣ ಸ್ವರೂಪ್ ಹಾಗೂ ಅಕಾಡೆಮಿ ಆಫ್ ಹೈಯರ್ ಲರ್ನಿಂಗ್‌ನ ಪ್ರಾಂಶುಪಾಲೆ ಡಾ.ಪದ್ಮಜಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News