ಲಿಂಗಾಯತ ಸ್ವತಂತ್ರ ಧರ್ಮ: ರಾಜ್ಯ ಸರಕಾರದ ಶಿಫಾರಸ್ಸು ಅಂಗೀಕರಿಸಲು ಬಸವಧರ್ಮ ಪೀಠ ಆಗ್ರಹ

Update: 2018-03-22 14:01 GMT

ಬೆಂಗಳೂರು, ಮಾ.22: ಸ್ವತಂತ್ರ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸರಕಾರಕ್ಕೆ ಬಸವಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ವರ್ಷಗಳ ಇತಿಹಾಸವಿರುವ ಲಿಂಗಾಯತ ಧರ್ಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂವಿಧಾನಿಕ ಮಾನ್ಯತೆ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯ. ಅದೇ ರೀತಿಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರದ ಶಿಫಾರಸ್ಸನ್ನು ಶೀಘ್ರವಾಗಿ ಅಂಗೀಕರಿಸಿ ಸಿಖ್, ಬೌದ್ಧ, ಜೈನ ಧರ್ಮಗಳ ಪಟ್ಟಿಯಲ್ಲಿ ಲಿಂಗಾಯತ ಧರ್ಮದ ಹೆಸರನ್ನು ಸೇರ್ಪಡೆ ಮಾಡುವ ಮೂಲಕ ಮಾನ್ಯತೆ ನೀಡಬೇಕು ಹಾಗೂ ರಾಷ್ಟ್ರೀಯ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮವನ್ನು ಒಡೆಯುತ್ತಿದ್ದಾರೆಂದು ಆರೋಪ ಮಾಡುತ್ತಿರುವುದು ಸರಿಯಲ್ಲ. 99 ಉಪ ಪಂಗಡಗಳಾಗಿ ಛಿದ್ರ-ಛಿದ್ರವಾಗಿದ್ದ ಲಿಂಗಾಯತರನ್ನು ಒಂದುಗೂಡಿಸುವ ಕೆಲಸ ಈ ಮೂಲಕ ಮಾಡಿದ್ದಾರೆ. ಪ್ರತ್ಯೇಕ ಧರ್ಮವನ್ನು ವಿರೋಧ ಮಾಡುವವರು ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರಿಗೆ ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ರೀತಿಯಲ್ಲಿಯೇ, ಬಸವತತ್ವ ಒಪ್ಪದ ವೀರಶೈವ-ಲಿಂಗಾಯತರಿಗೆ ಮತ್ತು ವೀರಶೈವರಲ್ಲದ ಇನ್ನಿತರ ಎಲ್ಲ ಜನಾಂಗಗಳಿಗೂ ಪ್ರತ್ಯೇಕವಾಗಿ ಸಾಧ್ಯವಿರಬಹುದಾದ ಸರಕಾರಿ ಸೌಲಭ್ಯಗಳನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News