ಮಾ.23 ರಂದು ರಾಜ್ಯಸಭಾ ಚುನಾವಣೆ: ಸಂಜೆಯೇ ಫಲಿತಾಂಶ

Update: 2018-03-22 14:21 GMT

ಬೆಂಗಳೂರು, ಮಾ. 22: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ಮಾ.23 ರಂದು ಬೆಳಗ್ಗೆ 9ಗಂಟೆಯಿಂದ ಮತದಾನ ನಡೆಯಲಿದ್ದು, ವಿಧಾನಸೌಧದ ಮೊದಲ ಮಹಡಿಯಲ್ಲಿನ ಕೊಠಡಿ ಸಂಖ್ಯೆ-106ರಲ್ಲಿ ಮತದಾನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ರಾಜ್ಯಸಭೆ ಚುನಾವಣೆಗೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಶಾಸಕರು ಮತ ಚಲಾಯಿಸಲಿದ್ದಾರೆ. ಆ ಬಳಿಕ ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆಡಳಿತಾರೂಢ ಕಾಂಗ್ರೆಸಿನ 3, ಬಿಜೆಪಿ-1 ಹಾಗೂ ಜೆಡಿಎಸ್‌ನ 1 ಅಭ್ಯರ್ಥಿ ಸೇರಿ ಐವರು ಅಭ್ಯರ್ಥಿಗಳು ಕಣದಲಿದ್ದಾರೆ. ಐವರು ಅಭ್ಯರ್ಥಿಗಳ ಪೈಕಿ ಗೆಲ್ಲುವರು ಯಾರು, ಸೋಲುವವರು ಯಾರು ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ವಿಧಾನಸಭೆಯ ಸಂಖ್ಯಾಬಲವನ್ನು ಆಧರಿಸಿ ಕಾಂಗ್ರೆಸ್-2, ವಿಪಕ್ಷ ಬಿಜೆಪಿ-1 ಸ್ಥಾನವನ್ನು ಸರಳ ಮತ್ತು ಸುಲಭವಾಗಿ ಗೆಲ್ಲಬಹುದು. ಆದರೆ, ನಾಲ್ಕನೆ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಜೆಡಿಎಸ್ ಬಂಡಾಯ ಅಭ್ಯರ್ಥಿಗಳ ಮೇಲೆ ನಾಲ್ಕನೆ ಸ್ಥಾನದ ಗೆಲುವು ನಿರ್ಧಾರವಾಗಲಿದೆ.

ಅಡ್ಡಮತದಾನದ ಭೀತಿ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಖಾತರಿಗಾಗಿ ಈಗಾಗಲೇ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ. ನಾಳಿನ ಚುನಾವಣೆ ರಾಜಕೀಯ ಪಕ್ಷಗಳ ಒಗ್ಗಟ್ಟಿನ ಅಗ್ನಿ ಪರೀಕ್ಷೆ ಎಂದೇ ಹೇಳಲಾಗುತ್ತಿದೆ.

ಅಭ್ಯರ್ಥಿಗಳು
ಬಿ.ಎಂ.ಫಾರೂಕ್(ಜೆಡಿಎಸ್)
ರಾಜೀವ್ ಚಂದ್ರಶೇಖರ್(ಬಿಜೆಪಿ)
ಡಾ.ಎಲ್.ಹನುಮಂತಯ್ಯ, ಸೈಯದ್ ನಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್ (ಕಾಂಗ್ರೆಸ್)
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News