ಪರಿವಾರ, ತಳವಾರ ಪಂಗಡಗಳು ಎಸ್ಟಿಗೆ ಸೇರ್ಪಡೆ: ಪ್ರಧಾನಿ-ಮುಖ್ಯಮಂತ್ರಿಗೆ ವಿ.ಎಸ್.ಉಗ್ರಪ್ಪ ಅಭಿನಂದನೆ

Update: 2018-03-22 14:30 GMT

ಬೆಂಗಳೂರು, ಮಾ.22: ನಾಯಕ ಸಮುದಾಯದ ಪರಿವಾರ ಮತ್ತು ತಳವಾರ ಪಂಗಡಗಳನ್ನು ಪರಿಶಿಷ್ಟ ಪಂಗಡ(ಎಸ್ಟಿ)ದ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರ ಸಮ್ಮತಿ ಸೂಚಿಸಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ಹಾಗೂ ಈ ಎರಡು ಪಂಗಡಗಳ ಸೇರ್ಪಡೆಗೆ ಶಿಫಾರಸ್ಸು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅಭಿನಂದನೆ ಸಲ್ಲಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1984-85ರಲ್ಲಿ ನಾಯಕ ಸಮುದಾಯದ ಪರಿವಾರ ಮತ್ತು ತಳವಾರದ ಜೊತೆಗೆ ವಾಲ್ಮೀಕಿ, ನಾಯಕ, ನಾಯಕ್, ಬೇಡ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಎರಡು ಕಂತುಗಳಲ್ಲಿ ಶಿಫಾರಸ್ಸು ಮಾಡಲಾಗಿತ್ತು ಎಂದರು.

1991ರಲ್ಲಿ ಕಾಶ್ಮೀರದ ಗುಜ್ಜಾರ್ ಸಮುದಾಯದ ಹೆಸರಿನ ಜೊತೆಗೆ ರಾಜ್ಯದ ನಾಯಕ ಸಮುದಾಯದ ಐದು ಪರ್ಯಾಯ ಪಂಗಡಗಳನ್ನು ಅಂದಿನ ಪ್ರಧಾನಿ ಚಂದ್ರಶೇಖರ್ ನೇತೃತ್ವದ ಸರಕಾರ ಸುಗ್ರೀವಾಜ್ಞೆ ಮೂಲಕ ಎಸ್ಟಿಗೆ ಸೇರಿಸಿತು. ಆನಂತರ, ಅಧಿಕಾರಕ್ಕೆ ಬಂದ ನರಸಿಂಹರಾವ್ ನೇತೃತ್ವದ ಕೇಂದ್ರ ಸರಕಾರವು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿ, ಉಭಯ ಸದನಗಳಲ್ಲಿ ಅನುಮೋದನೆ ಪಡೆದು, ರಾಷ್ಟ್ರಪತಿಯಿಂದ ಅಂಕಿತ ಪಡೆದು ಈ ಪಂಗಡಗಳಿಗೆ ನ್ಯಾಯ ಒದಗಿಸಲಾಗಿತ್ತು ಎಂದು ಅವರು ಹೇಳಿದರು.

ಪರಿವಾರ ಮತ್ತು ತಳವಾರ ಪಂಗಡಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ನಾಯಕ ಸಮಾಜದ ಶೇ.7ರಷ್ಟು ಜನರಿದ್ದಾರೆ. 2008ರಲ್ಲಾದ ಕ್ಷೇತ್ರ ಪುನರ್ ವಿಂಗಡನೆಯಿಂದ 15 ವಿಧಾನಸಭಾ ಹಾಗೂ ಎರಡು ಲೋಕಸಭಾ ಕ್ಷೇತ್ರಗಳು ಎಸ್ಟಿಗೆ ಮೀಸಲಾಗಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಲ್ಲೂ ಎಸ್ಟಿ ಜನಾಂಗಕ್ಕೆ ಮೀಸಲಾತಿ ಲಭ್ಯವಿದೆ ಎಂದು ಉಗ್ರಪ್ಪ ತಿಳಿಸಿದರು.

ಪರಿವಾರ ಮತ್ತು ತಳವಾರ ಪಂಗಡಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಇದು ಕೇವಲ ಸಚಿವ ಸಂಪುಟದ ತೀರ್ಮಾನಕ್ಕೆ ಮೀಸಲಾಗಿರದೆ ‘ಎಸ್ಟಿ ರಿಸರ್ವೇಶನ್ ಆರ್ಡರ್-1950’ಕ್ಕೆ ಈ ಎರಡು ಪರ್ಯಾಯ ಪಂಗಡಗಳನ್ನು ಸೇರಿಸಲು ಈಗ ನಡೆಯುತ್ತಿರುವ ಸಂಸತ್ತು ಅಧಿವೇಶನದಲ್ಲಿ ವಿಧೇಯಕ ತಂದು, ಉಭಯ ಸದನಗಳಲ್ಲಿ ಅಂಗೀಕಾರ ಪಡೆದು, ರಾಷ್ಟ್ರಪತಿಯ ಅಂಕಿತ ಹಾಕಿಸಬೇಕು ಎಂದು ಅವರು ಆಗ್ರಹಿಸಿದರು.

ಪರಿವಾರ ಮತ್ತು ತಳವಾರ ಪಂಗಡಗಳ ಸೇರ್ಪಡೆಯಿಂದ 10 ಲಕ್ಷ ಜನ ಎಸ್ಟಿಗೆ ಸೇರಲ್ಪಡುತ್ತಾರೆ. ನಮಗೆ ಪ್ರಮುಖವಾಗಿ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಸ್ಥಾನಮಾನಕ್ಕಾಗಿ ಮೀಸಲಾತಿ ಅಗತ್ಯ. ರಾಜಕೀಯವಾಗಿ ನಮಗೆ ನ್ಯಾಯ ಸಿಗಬೇಕಾದರೆ ಜನಸಂಖ್ಯೆಗೆ ಅನುಗುಣವಾಗಿ ಎಸ್ಟಿಗೆ ಲೋಕಸಭೆ ಹಾಗೂ ವಿಧಾನಸಭೆ ಸ್ಥಾನಗಳಲ್ಲಿ ಹೆಚ್ಚು ಸ್ಥಾನಗಳು ಸಿಗಬೇಕು ಎಂದು ಉಗ್ರಪ್ಪ ಹೇಳಿದರು.

ಕ್ಷೇತ್ರ ಪುನರ್ ವಿಂಗಡನೆಯನ್ನು 2025ರವರೆಗೆ ಮಾಡದಿರುವಂತೆ ಸಂವಿಧಾನದಲ್ಲಿ ನಿರ್ಬಂಧ ವಿಧಿಸಿಕೊಳ್ಳಲಾಗಿದೆ. ಅದನ್ನು ಸಡಿಲಗೊಳಿಸಿ ಕ್ಷೇತ್ರ ಪುನರ್ ವಿಂಗಡನೆ ಮಾಡಿದ್ದಲ್ಲಿ ಹೆಚ್ಚುವರಿಯಾಗಿ ನಾಲ್ಕೈದು ವಿಧಾನಸಭೆ ಕ್ಷೇತ್ರಗಳು ಹಾಗೂ ಕನಿಷ್ಟ ಒಂದು ಲೋಕಸಭಾ ಕ್ಷೇತ್ರ ಎಸ್ಟಿಗೆ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಎಸ್ಸಿ-ಎಸ್ಟಿ ಜನಸಂಖ್ಯೆಯು ಶೇ.24ರಷ್ಟು ಇದೆ. ರಾಜ್ಯ ಸರಕಾರವು ಬಜೆಟ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ 28 ಸಾವಿರ ಕೋಟಿ ರೂ.ಅನುದಾನ ಒದಗಿಸಿದೆ. ಕೇಂದ್ರ ಸರಕಾರವು ಇಡೀ ದೇಶಕ್ಕೆ ಅನ್ವಯಿಸುವಂತೆ 48 ಸಾವಿರ ಕೋಟಿ ರೂ.ಮೀಸಲಿಟ್ಟಿದೆ. ಬಿಜೆಪಿಯವರಿಗೆ ಎಸ್ಸಿ-ಎಸ್ಟಿ ಬಗ್ಗೆ ಬದ್ಧತೆಯಿದ್ದರೆ, ರಾಜ್ಯದ ಮಾದರಿಯಲ್ಲಿ ಕೇಂದ್ರ ಸರಕಾರದ ಬಜೆಟ್‌ನಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

ರಾಜ್ಯದಲ್ಲಿ ಎಸ್ಟಿ ಜನಸಂಖ್ಯೆ ಶೇ.7ರಷ್ಟು ಇದ್ದರೂ ಮೀಸಲಾತಿ ಪ್ರಮಾಣ ಶೇ.3ರಷ್ಟಿದೆ, ಎಸ್ಸಿ ಜನಸಂಖ್ಯೆ ಶೇ.17.1ರಷ್ಟು ಇದ್ದರೆ, ಮೀಸಲಾತಿ ಪ್ರಮಾಣ ಶೇ.15ರಷ್ಟು ಇದೆ. ಮೀಸಲಾತಿಯಿಂದ ವಂಚಿತವಾಗಿರುವ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಳ ಮಾಡಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News