‘ಲೂಟಿ ರವಿ’ ಎಂದು ಕರೆದಿರುವ ಸಿಎಂ ವಿರುದ್ಧ ಕಾನೂನು ಕ್ರಮ: ಸಿ.ಟಿ.ರವಿ

Update: 2018-03-22 14:34 GMT

ಬೆಂಗಳೂರು, ಮಾ.22: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನನ್ನನ್ನು ‘ಲೂಟಿ ರವಿ’ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಶಾಸಕ ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನನ್ನು ‘ಸಿ.ಟಿ.ರವಿ ಅಲ್ಲ, ಲೂಟಿ ರವಿ’ ಎಂದು ಹೇಳುವ ಮೂಲಕ ಚಿಕ್ಕಮಗಳೂರು ಕ್ಷೇತ್ರದ ಜನರಿಗೆ ಮುಖ್ಯಮಂತ್ರಿ ಅಪಮಾನ ಮಾಡಿದ್ದಾರೆ ಎಂದು ಕಿಡಿಗಾರಿದರು.

ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ, ನಾನು ಲೂಟಿ ಮಾಡಿರುವುದನ್ನು ನೀವು ಪ್ರಮಾಣ ಮಾಡುವ ಮೂಲಕ ಸಾಬೀತು ಪಡಿಸಿ ಎಂದು ಸವಾಲು ಹಾಕಿದ ಅವರು, ಚಿಕ್ಕಮಗಳೂರು ಸಣ್ಣ ಕ್ಷೇತ್ರ, ನಾನು ಯಾವುದೆ ಸಾರಿಗೆ ದಂಧೆ ಅಥವಾ ಪರ್ಸೆಂಟೇಜ್ ವ್ಯವಹಾರವನ್ನು ಮಾಡುತ್ತಿಲ್ಲ ಎಂದರು.

ಮುಖ್ಯಮಂತ್ರಿ ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಎದುರಿಸಬೇಕು, ಇಲ್ಲವೆ ಸಾರ್ವಜನಿಕವಾಗಿ ಕ್ಷಮಾಪಣೆ ಕೋರಬೇಕು, ಇಲ್ಲವೆ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಬೇಕು ಎಂದು ರವಿ ಹೇಳಿದರು.

ಈಗಾಗಲೆ ವಕೀಲರ ಜೊತೆ ಸಮಾಲೋಚನೆ ಮಾಡಿದ್ದು, ಕಾನೂನಾತ್ಮಕವಾದ ಕ್ರಮವನ್ನು ಕೈಗೊಳ್ಳುತ್ತೇನೆ. ಚಿಕ್ಕಮಗಳೂರಿನಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವುದಿಲ್ಲ. ಆದುದರಿಂದ, ಹತಾಶರಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಪ್ರತಿವರ್ಷ ಲೋಕಾಯುಕ್ತರಿಗೆ ನಾನು ಆಸ್ತಿ ವಿವರ ಸಲ್ಲಿಸುತ್ತೇನೆ. ಹೆಚ್ಚುವರಿ ಆದಾಯ ಇದ್ದರೆ ಅದನ್ನು ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಂಡು ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಗೆ ಅಧಿಕಾರದಲ್ಲಿದ್ದಾಗ ಚಿಕ್ಕಮಗಳೂರು ನೆನಪಿಗೆ ಬರಲಿಲ್ಲ. ಅವರ ಅಜ್ಜಿ ಇಂದಿರಾಗಾಂಧಿಯನ್ನು ಗೆಲ್ಲಿಸಿ ಕಳುಹಿಸಿಕೊಟ್ಟ ಚಿಕ್ಕಮಗಳೂರು ಜನತೆಗೆ ಅವರು ನೀಡಿರುವ ಕೊಡುಗೆ ಏನು? ಅಜ್ಜಿ ಹೇಳಿದ ರೈಲು ಬರಲು 40 ವರ್ಷ ಬೇಕಾಯಿತು. ನಮ್ಮ ಜಿಲ್ಲೆಗೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜಿಗೆ ಒಂದು ರೂ.ಅನುದಾನವನ್ನು ಬಿಡುಗಡೆ ಮಾಡದೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ ಎಂದು ರವಿ ಆಕ್ರೋಶ ವ್ಯಕ್ತಪಡಿಸಿದರು.

ಶೃಂಗೇರಿ ಪೀಠಾಧಿಪತಿಗಳು ರಾಹುಲ್‌ಗಾಂಧಿಗೆ ತಮ್ಮದೆ ಶೈಲಿಯಲ್ಲಿ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. ಆದರೆ, ಅವರ ಪಕ್ಷದ ಸರಕಾರ ಇಲ್ಲಿ ಹಿಂದೂ ಧರ್ಮವನ್ನು ಒಡೆದು, ಜಾತಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News