ತರಾತುರಿ ಶಂಕುಸ್ಥಾಪನೆಗಳಲ್ಲ, ಪೂರ್ವಯೋಜಿತ ಕಾರ್ಯಕ್ರಮಗಳು: ಸಚಿವ ಜಾರ್ಜ್

Update: 2018-03-22 14:38 GMT

ಬೆಂಗಳೂರು, ಮಾ.22: ನಗರದಲ್ಲಿ ಹಲವಾರು ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಿದ್ದು, ಚುನಾವಣೆ ಸಮೀಪಿಸುತ್ತಿದ್ದು, ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಶ್ರಮಿಸುತ್ತಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ನಗರೋತ್ಥಾನ ಯೋಜನೆಯಡಿ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಹಲವು ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಅದರಲ್ಲಿ ಬಾಕಿ ಉಳಿದುಕೊಂಡಿರುವ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಈಗ ನಡೆಯುತ್ತಿರುವ ಎಲ್ಲ ಉದ್ಘಾಟನೆಗಳು, ಶಂಕುಸ್ಥಾಪನೆಗಳು ತರಾತುರಿಯಲ್ಲಿ ನಡೆಯುತ್ತಿರುವುದಲ್ಲ. ಪೂರ್ವಯೋಜಿತ ಕಾರ್ಯಕ್ರಮಗಳು ಎಂದು ತಿಳಿಸಿದರು.

ನಾವು ಮುಗಿಯದ ಕಾಮಗಾರಿಯನ್ನು ಉದ್ಘಾಟಿಸಿ ಸರಕಾರದ ಹೆಸರು ಕಾಣಿಸಿಕೊಳ್ಳಬೇಕೆಂಬ ಪ್ರಯತ್ನ ಮಾಡುತ್ತಿಲ್ಲ. ಮುಂದಿನ ಅವಧಿಗೂ ನಮ್ಮ ಪಕ್ಷದ ಸರಕಾರವೇ ಅಧಿಕಾರಕ್ಕೆ ಬರಲಿದೆ. ನಮ್ಮ ಬಳಿ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಹೀಗಾಗಿ, ರಾಜ್ಯದ ಅಭಿವೃದ್ಧಿಗೆ, ಬೆಂಗಳೂರಿನ ಪ್ರಗತಿಗೆ ನಾವು ಇನ್ನಷ್ಟು ಕೊಡುಗೆ ನೀಡಲು ಬಯಸಿದ್ದೇವೆ. ಆದುದರಿಂದ ಹಿಂದಿನ ಭರವಸೆ ಪೂರೈಸಿ, ಮುಂದಿನ ಅವಧಿಗೆ ಹೊಸದನ್ನು ಯೋಚಿಸುತ್ತೇವೆ. ನಾವು ನೀಡಿರುವ ಆಶಯದ ಈಡೇರಿಕೆ ಕಾರ್ಯ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಸಚಿವ ಜಾರ್ಜ್ ಜಾಲಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಹೈಸ್ಕೂಲ್ ಕಟ್ಟಡವನ್ನು ಉದ್ಘಾಟಿಸಿದರು. ಇದಾದ ನಂತರ ಅಯ್ಯಪ್ಪಸ್ವಾಮಿ ದೇವಸ್ಥಾನ ಪೈಪ್ ಲೈನ್ ರಸ್ತೆಯಿಂದ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಮಾರ್ಗ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News