ನೀರಿನ ಮಿತಬಳಕೆ ಮಾಡದಿದ್ದರೆ ಜಲಕ್ಷಾಮ: ಅನುರಾಗ್ ಕುಮಾರ್

Update: 2018-03-22 14:42 GMT

ಬೆಂಗಳೂರು, ಮಾ.2: ನಮ್ಮಲ್ಲಿ ಲಭ್ಯವಿರುವ ಜಲಸಂಪನ್ಮೂಲಗಳ ಮಿತಬಳಕೆ, ನಿರ್ವಹಣೆ ಹಾಗೂ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜಲಕ್ಷಾಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಅನುರಾಗ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘದ ವತಿಯಿಂದ ಆಯೋಜಿಸಿದ್ದ ‘ವಿಶ್ವ ಜಲದಿನ-2018’ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು, ಪೆರು, ಈಜಿಪ್ಟ್‌ನಂತಹ ದೇಶಗಳು ನೀರಿನ ಕೊರತೆಯಿಂದಾಗಿ ಸಂಕಷ್ಟದಲ್ಲಿವೆ. ನಾವು ಜಲಮೂಲಗಳನ್ನು ಸಂರಕ್ಷಿಸದಿದ್ದರೆ, ಮುಂದೊಂದು ದಿನ ಜಲಕ್ಷಾಮದಿಂದ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಜಾಗತಿಕ ತಾಪಮಾನ ಏರಿಕೆ, ನೀರಿನ ಅತಿ ಬಳಕೆಯಿಂದ ಪ್ರಕೃತಿ ಸಂಪನ್ಮೂಲ ನಾಶವಾಗುತ್ತಿದೆ. ಇದನ್ನು ತಪ್ಪಿಸಲು ಪ್ರಸಕ್ತ ಸಾಲಿನಲ್ಲಿ ‘ನೇಚರ್ ಫಾರ್ ವಾಟರ್’ ಎಂಬ ಧ್ಯೇಯ ವಾಕ್ಯದೊಂದಿಗೆ ನಾವು ವಿಶ್ವ ಜಲದಿನವನ್ನು ಆಚರಿಸುತ್ತಿದ್ದೇವೆ. ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಪದ್ದತಿಗಳನ್ನು ಅಳವಡಿಸಿಕೊಂಡು ಕೆರೆಗಳ ಪುರುಜ್ಜೀವನಗೊಳಿಸಬೇಕಿದೆ ಎಂದು ಹೇಳಿದರು.

ಅಲ್ಲದೇ ಹೊಸ ತಂತ್ರಜ್ಞಾನ ಆವಿಷ್ಕಾರಗಳನ್ನು ಬಳಸಿಕೊಂಡು ನೀರನ್ನು ಮರುಬಳಕೆ ಮಾಡಬಹುದಾಗಿದೆ. ಹೀಗಾಗಿ, ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಬೇಕೆಂದ ಅವರು, ಬೆಂಗಳೂರು ನೀರು ಸರಬರಾಜು ಮಂಡಳಿಯು ನೀರಿನ ಕೊರತೆ ನೀಗಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ 775 ಎಂಎಲ್‌ಡಿ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ 1ನೇ ಘಟ್ಟದ ಯೋಜನೆ ಜಾರಿಗೆ ಬಂದರೆ ಬೆಂಗಳೂರಿಗೆ ನೀರಿನ ಕೊರತೆ ನೀಗುತ್ತದೆ ಎಂದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಮಾತನಾಡಿ, ನೀರಿನ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನೀರನ್ನು ಅನಗತ್ಯವಾಗಿ ಪೋಲು ಮಾಡಿದರೆ ಅನಾಹುತ ತಪ್ಪಿದ್ದಲ್ಲ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ನೀರಿನ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ಮುಂದಿನ ಪೀಳಿಗೆಗೆ ನೀರು ಉಳಿಸುವುದು ನಮ್ಮೆಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡಲು ಮುಂದಾಗುವುದರ ಜೊತೆಗೆ ಕೆರೆ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಈ ವೇಳೆ ಹೈಗ್ರೌಂಡ್ಸ್‌ನಿಂದ ಅಶೋಕ ಹೊಟೇಲ್‌ವರೆಗೆ ಜಾಗತಿ ಜಾಥಾ ನಡೆಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಅಭಿಯಂತರ ಸಂಘದ ಅಧ್ಯಕ್ಷ ಕೆಂಪರಾಮಯ್ಯ, ಕಾರ್ಯದರ್ಶಿ ದೇವರಾಜ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News