ಮಾಲ್ದೀವ್ಸ್: ತುರ್ತು ಪರಿಸ್ಥಿತಿ ತೆರವು

Update: 2018-03-22 14:49 GMT

ಮಾಲೆ (ಮಾಲ್ದೀವ್ಸ್), ಮಾ. 22: ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಮಾಲ್ದೀವ್ಸ್‌ನಲ್ಲಿ 45 ದಿನಗಳಿಂದ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಅಬ್ದುಲ್ಲಾ ಯಮೀನ್ ಗುರುವಾರ ತೆರವುಗೊಳಿಸಿದ್ದಾರೆ.

ದೇಶದ ಸುಪ್ರೀಂ ಕೋರ್ಟ್ ಜೈಲಿನಲ್ಲಿರುವ 9 ಪ್ರತಿಪಕ್ಷ ನಾಯಕರ ಮೇಲಿದ್ದ ಆರೋಪಗಳನ್ನು ವಜಾಗೊಳಿಸಿ ಅವರನ್ನು ಬಿಡುಗಡೆ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿದ ಬಳಿಕ, ಫೆಬ್ರವರಿ 4ರಂದು ಮೊದಲ ಕಂತಿನಲ್ಲಿ 15 ದಿನಗಳ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಲಾಗಿತ್ತು. ಬಳಿಕ ಅದನ್ನು ಇನ್ನೂ 30 ದಿನಗಳ ಕಾಲ ವಿಸ್ತರಿಸಲಾಗಿತ್ತು.

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಪ್ರತಿಪಕ್ಷಗಳ ನಾಯಕರ ವಿರುದ್ಧ ದಮನ ಕಾರ್ಯಾಚರಣೆ ನಡೆಸಲಾಗಿತ್ತು. ಮಾಜಿ ಸರ್ವಾಧಿಕಾರಿ ವೌಮೂನ್ ಗಯೂಮ್ ಸೇರಿದಂತೆ ಹಲವಾರು ಪ್ರತಿಪಕ್ಷ ನಾಯಕರು ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಬಂದಿಸಲಾಗಿತ್ತು. ಅವರ ವಿರುದ್ಧ ಈಗ ಭಯೋತ್ಪಾದನೆ ಮೊಕದ್ದಮೆಗಳನ್ನು ಹೂಡಲಾಗಿದೆ.

‘‘ರಾಷ್ಟ್ರೀಯ ಭದ್ರತೆಗೆ ಈಗಲೂ ಅಲ್ಪ ಬೆದರಿಕೆ ಇರುವ ಹೊರತಾಗಿಯೂ, ಹೆಚ್ಚಿನ ನಷ್ಟವಿಲ್ಲದೆ ಮುನ್ನಡೆಯಲು ದೇಶಕ್ಕೆ ಈಗ ಸಾಧ್ಯವಿರುವ ಕಾರಣ ಹಾಗೂ ಭದ್ರತಾ ಪಡೆಗಳ ಸಲಹೆಯಂತೆ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಲು ಅಧ್ಯಕ್ಷರು ನಿರ್ಧರಿಸಿದ್ದಾರೆ’’ ಎಂದು ಅವರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News