ಯಡಿಯೂರಪ್ಪರ ಕಿಕ್ ಬ್ಯಾಕ್ ಆರೋಪಕ್ಕೆ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ..

Update: 2018-03-22 15:15 GMT

ಬೆಂಗಳೂರು, ಮಾ.22: ಚಿತ್ರದುರ್ಗ ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡಿರುವ ಆರೋಪವು ಆಧಾರ ರಹಿತವಾದದ್ದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಣೆ ನೀಡಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಕಾಮಗಾರಿಯ ಕಾಲುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಯಲ್ಲೂ ಯಾವುದೆ ಅಕ್ರಮ ನಡೆದಿಲ್ಲ. ಅಲ್ಲದೆ, ನನ್ನ ವಿರುದ್ಧ ಮಾಡಲಾಗಿರುವ 25 ಕೋಟಿ ರೂ.ಕಿಕ್ ಪಡೆದಿರುವ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ತಿರುಗೇಟು ನೀಡಿದರು.

ವಿಶ್ವೇಶ್ವರಯ್ಯ ಜಲ ನಿಗಮ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ನಾಲ್ಕು ಸಂಸ್ಥೆಗಳು ಭಾಗವಹಿಸಿದ್ದು, ಈ ಪೈಕಿ ಕಡಿಮೆ ಬಿಡ್ ಸಲ್ಲಿಸಿದ್ದ ಕೇಂದ್ರ ಸರಕಾರದ ಅಧೀನದಲ್ಲಿರುವ ಎನ್‌ಪಿಸಿಎಲ್ ಸಂಸ್ಥೆಗೆ 157 ಕೋಟಿ ರೂ.ಗಳಿಗೆ ಟೆಂಡರ್ ಅಂತಿಮಗೊಳಿಸಲಾಗಿತ್ತು. ಆದರೆ, ಈ ಸಂಸ್ಥೆಯು ಸಮರ್ಪಕವಾದ ದಾಖಲೆಗಳನ್ನು ನೀಡುವಲ್ಲಿ ವಿಫಲವಾಗಿತ್ತು ಎಂದು ಅವರು ಹೇಳಿದರು.

ಇದಲ್ಲದೆ, ಮಣಿಪುರದ ನೀರಾವರಿ ಇಲಾಖೆಯ ನಿರ್ದೇಶಕರು, ಎನ್‌ಪಿಸಿಎಲ್ ಸಮರ್ಪಕವಾದ ದಾಖಲಾತಿಗಳನ್ನು ಸಲ್ಲಿಕೆ ಮಾಡಿಲ್ಲವೆಂದು ರಾಜ್ಯದ ನೀರಾವರಿ ಇಲಾಖೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಅಲ್ಪಾವಧಿ ಮರು ಟೆಂಡರ್ ಕರೆಯಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಮರುಟೆಂಡರ್ ಪ್ರಕ್ರಿಯೆ ಆರಂಭವೆ ಆಗಿಲ್ಲದಿರುವಾಗ ಅಕ್ರಮ ನಡೆಯುವ ಪ್ರಶ್ನೆಯೆ ಉದ್ಭವಿಸುವುದಿಲ್ಲ, ಈ ಕಾಮಗಾರಿಯಲ್ಲಿ ನಾನು 25 ಕೋಟಿ ರೂ.ಕಿಕ್ ಬ್ಯಾಕ್ ಪಡೆದಿದ್ದೇನೆ ಎಂದು ಆರೋಪಿಸಿರುವುದು ಆಧಾರ ರಹಿತವಾದದ್ದು. ಆದುದರಿಂದ, ಈ ಬಗ್ಗೆ ಯಾವುದೆ ತನಿಖೆ ನಡೆಸುವ ಅವಶ್ಯಕತೆಯಿಲ್ಲ ಎಂದು ಅವರು ಹೇಳಿದರು.

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ಮೂರು ವರ್ಷ ಅಧಿಕಾರ ನಡೆಸಿದ ಯಡಿಯೂರಪ್ಪಗೆ ಜಲ ನಿಗಮ ಮಂಡಳಿಯ ಟೆಂಡರ್ ಪಕ್ರಿಯೆಗಳು ಹೇಗೆ ನಡೆಯುತ್ತವೆ ಎನ್ನುವುದು ಮರೆತು ಹೋಗಿದೆಯೇ? ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲೆ ಈ ಜಲ ನಿಗಮಗಳು ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.

ಎನ್‌ಪಿಸಿಎಲ್ ಸಂಸ್ಥೆ ಟೆಂಡರ್‌ಗೆ ಸೂಕ್ತ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ, ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದು ಕೂಡ ಕಾನೂನು ಪ್ರಕಾರವೇ ನಡೆದಿದೆ. ಆದರೆ ಈ ಬಗ್ಗೆ ಮಾಹಿತಿ ಇದ್ದರೂ ಯಡಿಯೂರಪ್ಪಅನಗತ್ಯವಾಗಿ ಆರೋಪಗಳನ್ನು ಮಾಡಿರುವುದು ಸರಿಯಲ್ಲ ಎಂದು ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು.

ಲಿಂಗಾಯತರು, ಬಸವಣ್ಣನನ್ನು ಗಲ್ಲಿಗೇರಿಸಿದ ಯಡಿಯೂರಪ್ಪ, ಇದೀಗ ನನ್ನನ್ನು ಗಲ್ಲಿಗೆ ಏರಿಸಬೇಕು ಎಂದಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಸುಳ್ಳು ಆರೋಪಗಳನ್ನು ಮಾಡಿಕೊಂಡು ತಿರುಗುತ್ತಿರುವ ಯಡಿಯೂರಪ್ಪರನ್ನು ಬಿಜೆಪಿಯವರೆ ಗಲ್ಲಿಗೇರಿಸುತ್ತಾರೆ. ಅಥವಾ ಯಡಿಯೂರಪ್ಪನವರೆ ಬಿಜೆಪಿಯನ್ನು ಗಲ್ಲಿಗೇರಿಸುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ಹೂಗುಚ್ಛ ನೀಡಿ ಸ್ವಾಗತ: ನನ್ನ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಬೆದರಿಕೆ ಹಾಕಲಾಗುತ್ತಿದೆ. ಒಂದು ವೇಳೆ ಐಟಿ ಅಧಿಕಾರಿಗಳು ಬಂದರೆ ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ. ಅದಕ್ಕೂ ಮೊದಲು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಆಶೋಕ್ ಅವರ ಮನೆ ಮೇಲೆ ದಾಳಿ ನಡೆಯಲಿ ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದರು.

ಬಿಜೆಪಿ ಪರಿವರ್ತನಾ ರ್ಯಾಲಿ ಸಂದರ್ಭದಲ್ಲಿ ನನ್ನ ಮತಕ್ಷೇತ್ರಕ್ಕೆ ಬಂದಿದ್ದ ಯಡಿಯೂರಪ್ಪ, ನನ್ನ ಕರ್ಮಕಾಂಡ ಬಯಲು ಮಾಡುವುದಾಗಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿದ್ದರು. ಇತ್ತೀಚೆಗೆ ಟ್ವಿಟರ್‌ನಲ್ಲಿ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಹೇಳಿದ್ದರು. ಆದರೆ, ಎರಡು ಸಂದರ್ಭದಲ್ಲಿ ಅವರು ವಿಫಲರಾದರು. ಹತಾಶ ಮನೋಭಾವನೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ. ವಯಸ್ಸು, ಸಲಹೆಗಾರರ ಮೂರ್ಖತನ, ಅವಿವೇಕಿತನದಿಂದ ಯಡಿಯೂರಪ್ಪ ಇಂತಹ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News