ಭ್ರಷ್ಟಾಚಾರ ಕೊನೆಗೊಳಿಸಲು 2,000, 500 ರೂ. ನೋಟು ನಿಷೇಧಿಸಿ

Update: 2018-03-22 17:42 GMT

ಹೈದರಾಬಾದ್, ಮಾ.22: ಮುಖ್ಯವಾಗಿ ರಾಜಕೀಯದಿಂದ ಭ್ರಷ್ಟಾಚಾರವನ್ನು ತೊಲಗಿಸಲು 2,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವಂತೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಆಗ್ರಹಿಸಿದ್ದಾರೆ. ಅಮರಾವತಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ನಾಯ್ಡು, ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವ ಕಾರ್ಯವು ಇನ್ನಷ್ಟು ತೀವ್ರವಾಗಿ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಎಲ್ಲ ಆರ್ಥಿಕ ವ್ಯವಹಾರಗಳನ್ನು ಆನ್‌ಲೈನ್ ಮೂಲಕವೇ ನಡೆಸಬೇಕು ಎಂದು ಸಲಹೆ ನೀಡಿದ ಅವರು, ಆಂಧ್ರಪ್ರದೇಶ ಈ ನಿಟ್ಟಿನಲ್ಲಿ ಉತ್ತಮ ಅಭಿವೃದ್ಧಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು, 2016ರ ನವೆಂಬರ್‌ನಲ್ಲಿ ಎನ್‌ಡಿಎ ಸರಕಾರ ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ರಚಿಸಲ್ಪಟ್ಟ ನೀತಿ ಆಯೋಗದ ನಗದು ರಹಿತ ಆರ್ಥಿಕತೆಯ 13 ಸದಸ್ಯರ ಸಮಿತಿಯ ಮುಖ್ಯಸ್ಥರಾಗಿದ್ದರು. “ಹೆಚ್ಚು ಮೌಲ್ಯದ ನೋಟುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದ ದೇಶದ ಪ್ರಥಮ ರಾಜಕಾರಣಿ ನಾನಾಗಿದ್ದೇನೆ. ಇದೀಗ ಮತ್ತದೇ ಬೇಡಿಕೆಯನ್ನು ನಾನು ಸರಕಾರದ ಮುಂದಿಡುತ್ತಿದ್ದೇನೆ” ಎಂದು ನಾಯ್ಡು ತಿಳಿಸಿದ್ದಾರೆ. ಹೆಚ್ಚಿನ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದರಿಂದ ಚುನಾವಣೆಯ ಸಮಯದಲ್ಲಿ ಹಣ ಹಂಚುವುದನ್ನು ತಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಟಿಡಿಪಿ ಈಗಾಗಲೇ ರಾಜ್ಯದ 175 ವಿಧಾನಸಭಾ ಕ್ಷೇತ್ರಗಳಿಗೆ ತಲಾ 25 ಕೋಟಿ ರೂ.ನಂತೆ ಹಂಚಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮಾಡಿರುವ ಆರೋಪಕ್ಕೆ ಉತ್ತರಿಸಿರುವ ನಾಯ್ಡು, ಕೇಂದ್ರ ಸರಕಾರ 2,000 ಮತ್ತು 5000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲಿ. ಆಗ ನಾವು ನೋಟು ಹಂಚಿದ್ದೇ ಆದಲ್ಲಿ ಅವೆಲ್ಲವೂ ಉಪಯೋಗಕ್ಕೆ ಸಿಗದಂತಾಗುತ್ತದೆ ಎಂದು ಸವಾಲೆಸೆದಿದ್ದಾರೆ. ನಾವು ರಾಜ್ಯದ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುತ್ತೇವೆ. ಆದರೆ ಚುನಾವಣೆಯ ಸಮಯದಲ್ಲಿ ಬೆಂಗಳೂರು, ಮುಂಬೈ ಮುಂತಾದ ಕಡೆಗಳಿಂದ ಬರುವ ಜನರು ಇಲ್ಲಿ ನೋಟುಗಳನ್ನು ಹಂಚುವ ಮೂಲಕ ಮತಗಳಿಸಲು ಯತ್ನಿಸುತ್ತಾರೆ ಎಂದು ನಾಯ್ಡು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News