ಬಂಡಾಯ ಶಾಸಕರ ಮತ ಚಲಾವಣೆ ಪ್ರಕರಣ: ಮನವಿ ತಳ್ಳಿಹಾಕಿದ ಹೈಕೋರ್ಟ್

Update: 2018-03-22 16:17 GMT

ಬೆಂಗಳೂರು, ಮಾ. 22: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಕೋರಿ ಶಾಸಕರಾದ ಬಿ.ಬಿ.ನಿಂಗಯ್ಯ ಹಾಗೂ ಸಿ.ಎನ್.ಬಾಲಕೃಷ್ಣ ಅವರ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಏಳು ಮಂದಿ ಬಂಡಾಯ ಶಾಸಕರಿಗೆ ರಾಜ್ಯಸಭಾ ಚುನಾವಣೆಯಲಲಿ ಮತದಾನದಲ್ಲಿ ಭಾಗವಹಿಸದಂತೆ ನಿರ್ದೇಶನ ನೀಡಬೇಕೆಂದು ಕೋರಿ ಜೆಡಿಎಸ್ ಶಾಸಕರಿಬ್ಬರೂ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್.ಎಸ್.ಚೌವ್ಹಾಣ್ ಅವರ ಏಕಸದಸ್ಯ ಪೀಠ ಬುಧವಾರವೂ ವಿಚಾರಣೆ ನಡೆಸಿತು.

ನಿಂಗಯ್ಯ ಮತ್ತು ಬಾಲಕೃಷ್ಣ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ, ಒಂದು ವೇಳೆ ಮತದಾನದಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದಾದರೆ, ಕಡೇ ಪಕ್ಷ ಅವರ ಬ್ಯಾಲೆಟ್ ಪತ್ರಗಳನ್ನು ಪ್ರತ್ಯೇಕವಾಗಿ ಇರಿಸುವಂತಾದರೂ ನಿರ್ದೇಶಿಸಿ ಎಂದು ಕೋರಿದರು. ಆದರೆ ಇದನ್ನೂ ನ್ಯಾಯಪೀಠ ಮಾನ್ಯ ಮಾಡಲಿಲ್ಲ. ಸುಪ್ರೀಂ ಕೋರ್ಟ್ ಆದೇಶಗಳ ಪ್ರಕಾರ ಇಂತಹ ಪ್ರಕ್ರಿಯೆಯಲ್ಲಿ ಹೀಗೆಲ್ಲಾ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸೂಚಿಸಿತು.

ವಿಧಾನಸಭಾ ಸ್ಪೀಕರ್ ಕೋಳಿವಾಡ ಅವರ ಪರ ಹಾಜರಾಗಿದ್ದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ, ಅರ್ಜಿದಾರರ ಕೋರಿಕೆಯಂತೆ ಯಾವುದೇ ನಿರ್ದೇಶನ ನೀಡಲು ಕೋರ್ಟ್‌ಗೆ ಅಧಿಕಾರವಿಲ್ಲ ಎಂದರು. ಈ ಕುರಿತಂತೆ ಸ್ಪೀಕರ್ ಸಂಬಂಧಿಸಿದವರೊಂದಿಗೆ ಚರ್ಚಿಸಬೇಕಿದೆ. ಹೀಗಾಗಿ ಸವಿವರ ವಾದ ಮಂಡನೆಗೆ ಹಾಗೂ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು.

ಸ್ಪೀಕರ್ ಪರ ವಕೀಲರ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಎಪ್ರಿಲ್ 2ಕ್ಕೆ ಮುಂದೂಡಿತು.

ಪ್ರಕರಣ: ಪ್ರತಿವಾದಿಗಳಾದ ಶಾಸಕರಾದ ಝಮೀರ್ ಅಹಮದ್ ಖಾನ್, ಎನ್.ಚೆಲುವರಾಯಸ್ವಾಮಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಎಚ್.ಸಿ. ಬಾಲಕೃಷ್ಣ, ಆರ್.ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ ಹಾಗೂ ಎಸ್. ಭೀಮಾನಾಯ್ಕಾ 2016ರ ಜೂನ್ 11ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದರು.

ಹೀಗಾಗಿ ಇದು ಪಕ್ಷಾಂತರ ನಿಷೇಧ ಕಾಯ್ದೆ-1986ರ ಅನ್ವಯ ಮೇಲ್ಕಂಡ ಏಳು ಮಂದಿ ಶಾಸಕರ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಕೋರಿ ಶಾಸಕರೂ ಆಗಿರುವ ನಿಂಗಯ್ಯ ಹಾಗೂ ಬಾಲಕೃಷ್ಣ, ಸ್ಪೀಕರ್ ಕೋಳಿವಾಡ ಅವರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆಯನ್ನು ಮಾ.19ರಂದು ಪೂರ್ಣಗೊಳಿಸಿರುವ ಸ್ಪೀಕರ್ ಕೋಳಿವಾಡ ತೀರ್ಪನ್ನು ಕಾಯ್ದಿರಿಸಿದುದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News