ರಾಜ್ಯಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ: ಸಿಎಂ ವಿಶ್ವಾಸ

Update: 2018-03-23 07:56 GMT

ಬೆಂಗಳೂರು, ಮಾ.23: ರಾಜ್ಯಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಶುಕ್ರವಾರ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ.

‘‘ನಮ್ಮ ಬಳಿ ಮೂರು ಅಭ್ಯರ್ಥಿಗಳು ಗೆಲ್ಲುವಷ್ಟು ಮತಗಳಿವೆ. ಹಾಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ’’ ಎಂದು ಸಿಎಂ ಹೇಳಿದ್ದಾರೆ.

ಇಬ್ಬರು ಕಾಂಗ್ರೆಸ್ ಶಾಸಕರಿಗೆ ಎರಡನೇ ಬಾರಿ ಮತಪತ್ರ ನೀಡಿದ್ದನ್ನು ಪ್ರಶ್ನಿಸಿರುವ ಜೆಡಿಎಸ್ ಈ ಸಂಬಂಧ ಶಾಸಕರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ ಹಾಗೂ ಬಾಬುರಾವ್ ಚಿಂಚನಸೂರ್ ಬ್ಯಾಲಟ್ ಪೇಪರ್‌ನಲ್ಲಿ ಕಾಂಗ್ರೆಸ್ ಬದಲಿಗೆ ಬೇರೆ ಪಕ್ಷದ ಮುದ್ರೆ ಒತ್ತಿ ತಪ್ಪು ಮಾಡಿದ ಕಾರಣ ಇಬ್ಬರಿಗೂ ಎರಡನೇ ಬಾರಿ ಮತಪತ್ರ ನೀಡಲಾಗಿತ್ತು. ಈ ಕ್ರಮವನ್ನು ಜೆಡಿಎಸ್ ಬಲವಾಗಿ ಖಂಡಿಸಿ ಮತದಾನವನ್ನು ಕೆಲ ಕಾಲ ಸ್ಥಗಿತಗೊಳ್ಳಲು ಕಾರಣವಾಯಿತು.

ಬೆಳಗಾವಿಯ ಶಾಸಕ ಸಂಭಾಜಿ ಪಾಟೀಲ್ ಕೈ ನಡುಗುತ್ತಿರುವ ಕಾರಣ ತಾನೇ ಮತದಾನ ಮಾಡುವುದಕ್ಕೆ ಮುಂದಾದ ಕಾಂಗ್ರೆಸ್‌ನ ಲಕ್ಷ್ಮೀನಾರಾಯಣ ಅವರ ನಡೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಪಾಟೀಲ್ ಅನಾರೋಗ್ಯದ ಸರ್ಟಿಫಿಕೇಟ್ ತರುವಂತೆ ಒತ್ತಾಯಿಸಿದ ಪ್ರಸಂಗವೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News