ಮತದಾನ ಬಹಿಷ್ಕರಿಸಿದ ಜೆಡಿಎಸ್: ಕೇಂದ್ರ ಚುನಾವಣಾ ಆಯೋಗಕ್ಕೆ ದೂರು

Update: 2018-03-23 13:21 GMT

ಬೆಂಗಳೂರು, ಮಾ.23: ರಾಜ್ಯಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದ್ದು, ಈ ಚುನಾವಣೆಯನ್ನು ಮಾನ್ಯ ಮಾಡದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಫ್ಯಾಕ್ಸ್ ಮೂಲಕ ದೂರು ಸಲ್ಲಿಸಿ ಒತ್ತಾಯಿಸಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯ ಇತಿಹಾಸದಲ್ಲೆ ಈ ರೀತಿ ಎರಡು ಬಾರಿ ಮತದಾನಕ್ಕೆ ಅವಕಾಶ ನೀಡಿರಲಿಲ್ಲ. ಆದರೆ, ಚುನಾವಣಾಧಿಕಾರಿ ಇಂತಹ ಕೆಟ್ಟ ಸಂಪ್ರದಾಯಕ್ಕೆ ಓಂಕಾರ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಒಬ್ಬ ಹಿರಿಯ ರಾಜಕಾರಣಿ, ಅವರ ಜೀವನದಲ್ಲಿ ಎಷ್ಟು ಬಾರಿ ಮತದಾನ ಮಾಡಿಲ್ಲ. ಯಾರಿಗೆ ಮತ ಹಾಕಬೇಕು ಎಂಬುದು ಅವರಿಗೆ ಗೊತ್ತಿರಲಿಲ್ಲವೆ? ಕಾಂಗ್ರೆಸ್ ಏಜೆಂಟ್‌ಗೆ ಅಡ್ಡಮತದಾನ ಆಗಿರುವುದು ತಿಳಿದಿದೆ. ಆದರೆ, ಅಭ್ಯರ್ಥಿಗೆ ಗೊತ್ತಾಗಿರಲಿಲ್ಲ ಎಂದು ಅವರು ಹೇಳಿದರು.

ಕಾಗೋಡು ತಿಮ್ಮಪ್ಪ ಒಮ್ಮೆ ಮತ ಹಾಕಿದ ಬಳಿಕ, ಮತ್ತೊಂದು ಮತಪತ್ರ ಪಡೆದು ಮತ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಎದುರೇ ಈ ಬೆಳವಣಿಗೆ ನಡೆದಿದೆ. ವೀಕ್ಷಕರಾಗಿ ಬಂದಿದ್ದ ಅವರು ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸಿದ್ದಾರೆ. ಅಕ್ರಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ, ಜೆಡಿಎಸ್ ಮತದಾನವನ್ನು ಬಹಿಷ್ಕರಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ನೂರಲ್ಲ, ಸಾವಿರ ಸಿದ್ದರಾಮಯ್ಯ ಬಂದರೂ ಏನು ಆಗುವುದಿಲ್ಲ. ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್ ಇರಬೇಕೊ, ಬೇಡವೊ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ನಾನು ಬಿಜೆಪಿ ಪಕ್ಷದ ಪಕ್ಕ ನಿಂತು ಕೆಮ್ಮಿದರೆ ಕಾಂಗ್ರೆಸ್ ಪಕ್ಷವೇ ಇರುವುದಿಲ್ಲ. ಮೂಲ ಕಾಂಗ್ರೆಸ್ಸಿಗರು ಸಕ್ರಮಕ್ಕೆ ಬಗರ್‌ಹುಕುಂ ಕೇಳುತ್ತಾರೆ. ಆದರೆ,ವಲಸೆ ಕಾಂಗ್ರೆಸ್ಸಿಗರು ಸಾಗುವಳಿ ಮಾಡಲು ಬಿಡುತ್ತಿಲ್ಲ ಎಂದು ಅವರು ಹೇಳಿದರು.

ನಾನು ಅವಕಾಶವಾದಿಯಲ್ಲ, ಸಿದ್ದರಾಮಯ್ಯ ಅವಕಾಶವಾದಿ. ಬಿಬಿಎಂಪಿ ಮೇಯರ್ ಸ್ಥಾನಕ್ಕೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಕಾಂಗ್ರೆಸ್‌ಗೆ ಬಂದಿರುವ ದಯನೀಯ ಪರಿಸ್ಥಿತಿ ಜೆಡಿಎಸ್‌ಗೆ ಬಂದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News