ರಾಹುಲ್ ಗಾಂಧಿ ಹೇಳಿಕೆಗೆ ಬಸವರಾಜ್ ಹೊರಟ್ಟಿ ಖಂಡನೆ

Update: 2018-03-23 12:46 GMT

ಬೆಂಗಳೂರು, ಮಾ.23: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಜೆಡಿಎಸ್ ಅನ್ನು ಬಿಜೆಪಿಯ ‘ಬಿ’ ಟೀಂ ಎಂದು ಹಾಸನದಲ್ಲಿ ಹೇಳುವ ಮೂಲಕ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ಎತ್ತಿ ತೋರಿಸಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರಬಲವಾಗಿ ಬೆಳೆದಿರುವ ಜೆಡಿಎಸ್ ಪಕ್ಷದ ಏಳಿಗೆಯನ್ನು ಸಹಿಸದೆ ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿದ್ದನ್ನೆ ಗಿಳಿಪಾಠವನ್ನಾಗಿ ಒಪ್ಪಿಸುವುದರ ಮೂಲಕ ರಾಜಕೀಯ ನೈಪುಣ್ಯತೆ, ರಾಜ್ಯ ರಾಜಕೀಯದ ಸಂಪೂರ್ಣ ಮಾಹಿತಿ ತಮಗೆ ಗೊತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆಂದು ಹೊರಟ್ಟಿ ಹೇಳಿದರು.

ರಾಜ್ಯದ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌ಗೆ ಬರಬೇಕೆಂಬ ದುರುದ್ದೇಶದಿಂದ ಜೆಡಿಎಸ್, ಬಿಜೆಪಿಯ ‘ಬಿ’ ಟೀಂ ಎಂದು ಅರ್ಥವಿಲ್ಲದೆ ಹೇಳಿಕೆ ನೀಡಿದ್ದಾರೆ. ಇದೇ ಕಾಂಗ್ರೆಸ್ ಪಕ್ಷವು ಜೆಡಿಎಸ್‌ನೊಂದಿಗೆ ಸಮ್ಮಿಶ್ರ ಸರಕಾರ ನಡೆಸಿತ್ತು ಎಂಬುದನ್ನು ರಾಹುಲ್‌ಗಾಂಧಿ ತಿಳಿದುಕೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದರು.

ಬಿಬಿಎಂಪಿಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿರುವ ಇವರು ನಂಜನಗೂಡು ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಕ್ಕೆ ಅಂಗಲಾಚಿದ್ದನ್ನು ಮರೆತಂತೆ ಕಾಣುತ್ತದೆ. ಕಾಂಗ್ರೆಸ್ ಪಕ್ಷದ ನಾಯಕರು ಹಲವಾರು ಸಲ ಜೆಡಿಎಸ್ ಬೆಂಬಲಕ್ಕಾಗಿ ಎಡತಾಕಿದ್ದನ್ನು ಮರೆತಿರುವ ಕಾಂಗ್ರೆಸ್ ಅಧ್ಯಕ್ಷ, ರಾಷ್ಟ್ರ ಹಾಗೂ ರಾಜ್ಯ ರಾಜಕೀಯದ ಆಳ-ಅಗಲಗಳ ಬಗ್ಗೆ ತಿಳಿದುಕೊಂಡು ಮಾತನಾಡುವುದು ಅವರ ಪಕ್ಷಕ್ಕೆ ಹಾಗೂ ಅವರಿಗೆ ಶೋಭೆ ತರುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಮತದಾರರು ಪ್ರಬುದ್ಧರಿದ್ದು, ಇವರ ರಾಜಕೀಯ ವರಸೆಯ ಹೇಳಿಕೆಗಳ ಬಗ್ಗೆ ತಿಳಿದುಕೊಳ್ಳದವರೇನಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ರಾಜಕೀಯ ರಂಗದ ಹಲವಾರು ಮಜಲುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ತಪ್ಪು ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗುವುದನ್ನು ಇನ್ನಾದರೂ ಕೈ ಬಿಡಲಿ, ಅವರ ಹೇಳಿಕೆಯನ್ನು ಅತ್ಯಂತ ಕಠಿಣವಾಗಿ ನಾನು ವಿರೋಧಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News