ಚೆಮ್ಮನ್ನೂರು ಜ್ಯುವೆಲ್ಲರ್ಸ್ ದರೋಡೆ ಯತ್ನ ಪ್ರಕರಣ: ನಾಲ್ವರು ಹೈಟೆಕ್ ದರೋಡೆಕೋರರ ಬಂಧನ

Update: 2018-03-23 14:20 GMT

ಬೆಂಗಳೂರು, ಮಾ.23: ರಾಜಾಜಿನಗರದ ಚೆಮ್ಮನ್ನೂರು ಜ್ಯುವೆಲ್ಲರ್ಸ್ನ ಭದ್ರತಾ ಸಿಬ್ಬಂದಿಯ ಮೇಲೆ ಗಂಭೀರ ಹಲ್ಲೆ ಹಾಗೂ ಪೆಟ್ರೋಲ್‌ ಬಾಂಬ್ ಎಸೆದು ದರೋಡೆಗೆ ವಿಫಲ ಪ್ರಯತ್ನ ನಡೆಸಿದ್ದ ನಾಲ್ವರು ಹೈಟೆಕ್ ದರೋಡೆಕೋರರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರಿನ ಶಿವು ಅಲಿಯಾಸ್ ಶಿವಮೂರ್ತಿ(30), ಆತನ ಸಹೋದರ ಶಂಕರ್(26), ರಾಮಮೂರ್ತಿ ನಗರದ ನಿವೇಶ್‌ಕುಮಾರ್(29) ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಜಗದೀಶ್(30) ಬಂಧಿತ ಆರೋಪಿಗಳಾಗಿದ್ದಾರೆ.

ಇವರು ಕಳೆದ 2011 ರಿಂದ ಜ್ಯುವೆಲ್ಲರಿ ಅಂಗಡಿಗಳ ದರೋಡೆ ನಡೆಸಿ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಶ್ರೀಲಂಕಾದಲ್ಲಿ ವಿಲೇವಾರಿ ಮಾಡಿದ್ದರು. ಬಂಧಿತರಿಂದ ಒಂದು ಕೋಟಿ ರೂ.ಮೌಲ್ಯದ ಚಿನ್ನಾಭರಣ, ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ಶಿವಮೂರ್ತಿ ಹಾಗೂ ಶಂಕರ್ ಜ್ಯೋತಿಷಿ ಕೃಷ್ಣಪ್ಪನ ಮಕ್ಕಳಾಗಿದ್ದಾರೆ. ಆರೋಪಿ ಶಿವಮೂರ್ತಿ ಶಾಲಾ ದಿನಗಳಲ್ಲಿಯೆ ಮನೆ ತೊರೆದು ದರೋಡೆಯನ್ನು ಕರಗತ ಮಾಡಿಕೊಂಡಿದ್ದನು. ಈತನ ತಮ್ಮ ಶಂಕರ್ ಬಿಕಾಂ ಮುಗಿಸಿ ಅಣ್ಣನ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ. 2011ರಿಂದ 2012ರ ನಡುವೆ ರಾಮಮೂರ್ತಿ ನಗರದ ಸಂತೋಷ್ ಆಭರಣ ಮಳಿಗೆ ಸೇರಿ ಮೂರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಪೀಣ್ಯ ಹಾಗೂ ಸುಬ್ರಮಣ್ಯ ನಗರದ ಚೆಮ್ಮನ್ನೂರ್ ಜ್ಯುವೆಲರ್ಸ್‌ ದರೋಡೆ ಪ್ರಕರಣದಲ್ಲಿ 8 ಕೆಜಿ ಚಿನ್ನಾಭರಣಗಳನ್ನು ರಾಜ್ಯ, ಇಲ್ಲವೇ ಹೊರ ರಾಜ್ಯಗಳಲ್ಲಿ ವಿಲೇವಾರಿ ಮಾಡಿದ್ದಾರೆ. ಇವರೊಂದಿಗೆ ಆರೋಪಿ ಸಾಂಗ್ಲಿ ಮೂಲದ ಜಗದೀಶ್ ಸೇರಿಕೊಂಡು ದರೋಡೆ ಮಾಡುತ್ತಿದ್ದ ಚಿನ್ನಾಭರಣಗಳನ್ನು ಚೆನ್ನೈ ಹಾಗೂ ಶ್ರೀಲಂಕಾದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ಸುನಿಲ್‌ಕುಮಾರ್ ತಿಳಿಸಿದರು.

ರಿಯಲ್ ಎಸ್ಟೇಟ್ ದಂಧೆ: ಆರೋಪಿ ಜಗದೀಶ್ ಮೂಲಕ ಸುಮಾರು 8 ಕೆಜಿ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಶಿವಮೂರ್ತಿ, ಅದರಿಂದ ಬಂದ 1 ಕೋಟಿ 25 ಲಕ್ಷ ರೂ. ಹಣವನ್ನು ಫಾರ್ಚುನರ್ ಹಾಗೂ ಐ-20 ಕಾರನ್ನು ಖರೀದಿಸಿ ಯಲಹಂಕದಲ್ಲಿ ಆರ್‌ಎಸ್ ಬ್ಯುಸಿನೆಸ್ ಸೆಲ್ಯೂಷನ್ ಎಂಬ ರಿಯಲ್ ಎಸ್ಟೇಟ್ ಕಚೇರಿಯನ್ನು ತೆರೆದಿದ್ದ. ಆರೋಪಿಗಳು ಶಿರಾದ ಬಳಿ 11 ಎಕರೆ ಜಮೀನು ಖರೀದಿಸಲು ಮುಂಗಡ ಹಣ ನೀಡಿ ಇನ್ನಿತರ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿ ನಷ್ಟ ಮಾಡಿಕೊಂಡರು. ಅಷ್ಟರಲ್ಲಿ ಶಿವಮೂರ್ತಿ ಹಾಗೂ ಶಂಕರ್ ಬಳಿಯಿದ್ದ ಹಣ ಖರ್ಚಾಗಿ ಹೋಗಿತ್ತು. ಈ ನಡುವೆ ಮೂರು-ನಾಲ್ಕು ವರ್ಷ ದರೋಡೆಯಿಂದ ದೂರವಿದ್ದರು. ತದನಂತರ 2016ರ ನಂತರ ಪುನಃ ದರೋಡೆಗೆ ಮುಂದಾಗಿದ್ದರು.

ಕಳೆದ ಫೆ.19ರಂದು ಸುಬ್ರಮಣ್ಯ ನಗರದ ಚೆಮ್ಮನ್ನೂರ್ ಜ್ಯುವೆಲ್ಲರ್ಸ್ನ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿ, ಸಾರ್ವಜನಿಕರನ್ನು ಬೆದರಿಸಿ ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ದರೋಡೆಗೆ ಪ್ರಯತ್ನಿಸಿದರು. ಆದರೆ, ಸಾಧ್ಯವಾಗದೆ ವಿಫಲ ಯತ್ನ ನಡೆಸಿ ದೇವನಹಳ್ಳಿಗೆ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಡಿಸಿಪಿ ಚೇತನ್‌ಸಿಂಗ್ ನೇತೃತ್ವದ ತಂಡ 43 ಕೆಜಿ ಮೌಲ್ಯದ ಚಿನ್ನ, 57ಲಕ್ಷ ರೂ. ಮೌಲ್ಯದ 2 ಕಾರುಗಳು, 4 ದ್ವಿಚಕ್ರ ವಾಹನಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News