ಮಹಿಳೆ-ಮಕ್ಕಳ ಮೇಲಿನ ಅತ್ಯಾಚಾರ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರಕ್ಕೆ ಶಿಫಾರಸು: ಉಗ್ರಪ್ಪ

Update: 2018-03-23 14:36 GMT

ಬೆಂಗಳೂರು, ಮಾ. 23: ‘ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ತಡೆಗಟ್ಟಲು ರಾಷ್ಟ್ರೀಯ ನೀತಿಯನ್ನು ರೂಪಿಸುವುದು ಅಗತ್ಯ. ಆ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ರೂಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂಬುದು ಸೇರಿ 135 ಮಹತ್ವದ ಶಿಫಾರಸುಗಳ ವರದಿಯನ್ನು ವಿ.ಎಸ್.ಉಗ್ರಪ್ಪ ಅಧ್ಯಕ್ಷತೆಯ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ-ಅತ್ಯಾಚಾರ ನಿಯಂತ್ರಿಸುವ ತಜ್ಞರ ಸಮಿತಿ ಸರಕಾರಕ್ಕೆ ಸಲ್ಲಿಸಿದೆ.

ಶುಕ್ರವಾರ ವಿಧಾನಸೌಧದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೊಠಡಿಯಲ್ಲಿ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಉಗ್ರಪ್ಪ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಎಲ್ಲ ರಾಜ್ಯಗಳಲ್ಲೂ ಸಾಮಾನ್ಯ ಸಮಸ್ಯೆಯಾಗಿದ್ದು, ಹಲವು ಕಾಯ್ದೆ ಕಾನೂನುಗಳಿಗೆ ತಿದ್ದುಪಡಿ ಅಗತ್ಯ ಇರುವುದರಿಂದ ರಾಷ್ಟ್ರೀಯ ನೀತಿ ರೂಪಿಸುವುದು ಅಗತ್ಯ ಎಂದರು.

2015ರ ಡಿಸೆಂಬರ್ 30ರಂದು ಮಧ್ಯಂತರ ವರದಿಯನ್ನು ಸಮಿತಿಯು ಸಲ್ಲಿಸಿದ್ದು, ಅದರಲ್ಲಿ 17 ಶಿಫಾರಸುಗಳನ್ನು ಮಾಡಲಾಗಿದೆ. ಇದೀಗ ಅಂತಿಮ ವರದಿಯು ಸುಮಾರು 6 ಸಾವಿರಕ್ಕೂ ಹೆಚ್ಚು ಪುಟಗಳಿದ್ದು, 135ಶಿಫಾರಸುಗಳನ್ನು ಒಳಗೊಂಡಿದೆ. ಜೊತೆಗೆ ಜಿಲ್ಲೆಗಳಲ್ಲಿ ನಡೆಸಿದ ಸಭೆಗಳ ನಡವಳಿಗಳು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ಪ್ರಕರಣಗಳ ಅಂಕಿಅಂಶಗಳನ್ನೂ ವರದಿಯಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ, ದೂರು ಸ್ವೀಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ ಕುರಿತು ಶಿಫಾರಸುಗಳನ್ನು ಮಾಡಲಾಗಿದೆ.

ಪ್ರಕರಣ ದಾಖಲಾದ ನಿಗದಿತ ಅವಧಿಯೊಳಗೆ ತನಿಖೆ, ವಿಚಾರಣೆಗಳು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೊಣೆಗಾರಿಕೆ ವಹಿಸುವ ಕುರಿತು, ಸಂತ್ರಸ್ತರಿಗೆ ಪರಿಹಾರವನ್ನು ನಗದು ರೂಪದಲ್ಲಿ ಮಾತ್ರವಲ್ಲ, ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೊಗಕ್ಕೆ ನೆರವು ನೀಡುವ ಮೂಲಕವೂ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದರು.

ಪ್ರಸ್ತುತ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ ಇದ್ದು, ಶಿಕ್ಷೆಯ ಪ್ರಮಾಣ ಕನಿಷ್ಟ ಶೇ.50ಕ್ಕಿಂತ ಹೆಚ್ಚಿರುವಂತೆ ಕ್ರಮ ಜರುಗಿಸಲು ಹಾಗೂ ಇದರ ಸಂಪೂರ್ಣ ಜವಾಬ್ದಾರಿ ಎಸ್ಪಿ/ಡಿಸಿಪಿ, ವಿಚಾರಣಾಧಿಕಾರಿಗಳನ್ನು ಹೊಣೆಗಾರರಾಗಿಸಿ ಕಾನೂನಿನಲ್ಲಿ ಬದಲಾವಣೆ ತರಬೇಕು. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಲಿಂಗ ಸಂವೇದನಾ ತರಬೇತಿ ಶಿಬಿರಗಳನ್ನು ಕಡ್ಡಾಯಗೊಳಿಸಬೇಕು.

ಆಸ್ತಿ ಮುಟ್ಟುಗೋಲು: ಅಪರಾಧವೆಸಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗುವವರಿಗೆ ಮತದಾನದ ಹಕ್ಕನ್ನು ಶಾಶ್ವತವಾಗಿ ಕಿತ್ತು ಹಾಕಬೇಕು. ಅಲ್ಲದೆ, ಅವರ ಹೆಸರಿನಲ್ಲಿರುವ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.

ಪ್ರಾಥಮಿಕ ಶಾಲೆಯಿಂದಲೇ ಪಠ್ಯಗಳಲ್ಲಿ ಲಿಂಗ ಸಮಾನತೆ ಬೋಧಿಸಲು ಕ್ರಮ ವಹಿಸಬೇಕು. ದೌರ್ಜನ್ಯ ಪ್ರಕರಣಗಳ ತನಿಖೆಗೆ ವಿಶೇಷ ಪೊಲೀಸ್ ಠಾಣೆಗಳನ್ನು ಎಲ್ಲ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಬೇಕು. ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಬೇಕು. ಬಸ್, ರೈಲ್ವೆ, ನಿಲ್ದಾಣ, ಮಾಲ್‌ಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ನಾಪತ್ತೆಯಾದ ಹೆಣ್ಣು ಮಕ್ಕಳ ಪತ್ತೆಗೆ ವಿಶೇಷ ಪೊಲೀಸ್ ದಳ ರಚಿಸಬೇಕು. ಸಾಕ್ಷಿದಾರರಿಗೆ ರಕ್ಷಣೆಗೆ ಕಾಯ್ದೆ ಜಾರಿಯಾಗಬೇಕು. ಸರಕಾರಿ ಕಚೇರಿ, ಶಾಲಾ-ಕಾಲೇಜು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ವಿಶಾಖಾ ಮಾರ್ಗದರ್ಶಿ ಅನ್ವಯ ದೌರ್ಜನ್ಯ ತಡೆಗೆ ಸಮಿತಿ ರಚನೆ ಮಾಡಬೇಕು. ಬೆಂಗಳೂರು ಸೇರಿ ಇನ್ನಿತರ ನಗರಗಳಲ್ಲಿ ಮೋಜು-ಮಸ್ತಿ ನಡೆಸುವ ಪಬ್, ಫರ್ಜಿ ಕೆಫೆ, ಕಾಫಿ ಬಾರ್, ಐಷಾರಾಮಿ ಹೊಟೇಲ್‌ಗಳ ಮೇಲೆ 24ಗಂಟೆಗಳ ಕಾಲ ಪೊಲೀಸರ ನಿಗಾವಹಿಸಬೇಕು.

ಅತ್ಯಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಸಿನಿಮಾ ಪ್ರದರ್ಶನಕ್ಕೂ ಮೊದಲು ‘ಮಹಿಳೆ ಮತ್ತು ಮಕ್ಕಳನ್ನು ಗೌರವಿಸಿ, ದೌರ್ಜನ್ಯದಿಂದ ಮುಕ್ತಗೊಳಿಸಿ’ ಎನ್ನುವ ಸಂದೇಶ ನೀಡುವ ಕಿರುಚಿತ್ರ ಪ್ರದರ್ಶನಕ್ಕೆ ಕಾನೂನು ರೂಪಿಸಬೇಕು. ಮಹಿಳೆಯರು ಶೇ.50 ಮತ್ತು 0-18 ವರ್ಷದ ಮಕ್ಕಳು ಶೇ.38ರಷ್ಟಿದ್ದು, ಈ ಮಹಿಳೆಯರು-ಮಕ್ಕಳ ರಕ್ಷಣೆ ದೃಷ್ಟಿಯಿಂದ ಜಾಗೃತಿ ಮೂಡಿಸಲು ಖಾಯಂ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.

ತಜ್ಞರ ಸಮಿತಿಯ ಎಲ್ಲ ಶಿಫಾರಸುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ರಾಜ್ಯದಲ್ಲಿನ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಿತಿ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News