ಮರುಪರಿಶೀಲನೆ ಕೋರದಿದ್ದರೆ ಸರಕಾರದ ಮೇಲೆ ವ್ಯತಿರಿಕ್ತ ಪರಿಣಾಮ: ಬಿಜೆಪಿಯ ದಲಿತ ಸಂಸದರ ಎಚ್ಚರಿಕೆ

Update: 2018-03-23 15:06 GMT

ಹೊಸದಿಲ್ಲಿ,ಮಾ.23: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ(ದೌರ್ಜನ್ಯಗಳ ತಡೆ) ಕಾಯ್ದೆಯಲ್ಲಿನ ದಂಡನೆ ನಿಯಮಗಳನ್ನು ದುರ್ಬಲಗೊಳಿಸಿ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಹೊರಡಿಸಿರುವ ಆದೇಶದ ಮರುಪರಿಶೀಲನೆಯನ್ನು ಕೋರಿ ಸರಕಾರವು ಅರ್ಜಿಯನ್ನು ಸಲ್ಲಿಸದಿದ್ದರೆ ಅದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ ಎಂದು ಬಿಜೆಪಿಯ ದಲಿತ ಸಂಸದ ಉದಿತ್ ರಾಜ್ (ವಾಯುವ್ಯ ದಿಲ್ಲಿ) ಅವರು ಶುಕ್ರವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸರಕಾರವು ಆದೇಶದ ವಿರುದ್ಧ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸದಿದ್ದರೆ ಅದು ಖಂಡಿತವಾಗಿಯೂ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಧನಾತ್ಮಕ ಬೆಳವಣಿಗೆಗಳ ಹೆಗ್ಗಳಿಕೆ ಪಡೆಯುವ ಸರಕಾರವು ನಕಾರಾತ್ಮಕ ಬೆಳವಣಿಗೆಗಳ ಹೊಣೆಯನ್ನೂ ಸ್ವೀಕರಿಸಬೇಕಾಗುತ್ತದೆ ಎಂದರು.

ಈ ವಿಷಯವನ್ನು ಮತ್ತು ದಲಿತರ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ದ ಇತ್ತೀಚಿನ ಆದೇಶವನ್ನು ಪ್ರಸ್ತಾಪಿಸಲು ತಾನು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಕೋರಿದ್ದೇನೆ ಎಂದು ಅಖಿಲ ಭಾರತ ಎಸ್‌ಸಿ/ಎಸ್‌ಟಿ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥರೂ ಆಗಿರುವ ಮಾಜಿ ಭಾರತೀಯ ಕಂದಾಯ ಸೇವೆ(ಐಆರ್‌ಎಸ್)ಯ ಅಧಿಕಾರಿ ರಾಜ್ ತಿಳಿಸಿದರು.

 ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಸರಕಾರಿ ನೌಕರನ ಬಂಧನಕ್ಕೆ ಅಧಿಕೃತ ಪೂರ್ವಾನುಮತಿ ಮತ್ತು ಖಾಸಗಿ ವ್ಯಕ್ತಿಯ ಬಂಧನಕ್ಕೆ ಎಸ್‌ಎಸ್‌ಪಿಯ ಅನುಮತಿಯನ್ನು ಕಡ್ಡಾಯಗೊಳಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಅವರು ಹೇಳಿದರು.

 ಆಡಳಿತ ಬಿಜೆಪಿಯ ಹಲವಾರು ದಲಿತ ಸಂಸದರೂ ಸರಕಾರವು ನ್ಯಾಯಾಲಯದ ಆದೇಶದ ವಿರುದ್ಧ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಬೇಕೆಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಮಿತ್ರಪಕ್ಷ ಎಲ್‌ಜೆಪಿಯ ವರಿಷ್ಠರೂ ಆಗಿರುವ ರಾಮ ವಿಲಾಸ ಪಾಸ್ವಾನ್‌ರಂತಹ ದಲಿತ ಸಚಿವರೂ ಮರುಪರಿಶೀಲನೆ ಅರ್ಜಿಯ ಬಗ್ಗೆ ಒಲವು ಹೊಂದಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರಕಾರಕ್ಕೆ ಸೂಚಿಸಿವೆ.

ಸರಕಾರವು ಆದೇಶವನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿ ಸಲಿದೆ ಎಂಬ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಹೇಳಿಕೆಯನ್ನು ರಾಜ್ ಬೆಂಬಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News