ತುಂಗಭದ್ರಾ ಹಿನ್ನೀರಿನಿಂದ ಪಾವಗಡಕ್ಕೆ ನೀರು: 2618 ಕೋಟಿ ರೂ.ವೆಚ್ಚದ ಯೋಜನೆಗೆ ಸಚಿವ ಸಂಪುಟ ತೀರ್ಮಾನ

Update: 2018-03-23 16:33 GMT

ಬೆಂಗಳೂರು, ಮಾ.23: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ 400 ಜನವಸತಿಗಳಿಗೆ ಹಾಗೂ ಮೊಳಕಾಲ್ಮೂರು, ಚಳ್ಳಕೆರೆ, ಬಳ್ಳಾರಿಯ ಕೂಡ್ಲಿಗಿ, ಉಜ್ಜನಿಯ 216, ಹೊಸಪೇಟೆಯ 14, ಚಿತ್ರದುರ್ಗದ 59 ಗ್ರಾಮಗಳಿಗೆ 2618 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ 2.3 ಟಿಎಂಸಿ ನೀರು ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಪೂರೈಸುವ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ತಿಳಿಸಿದರು.

ತರೀಕರೆಯ 113 ಗ್ರಾಮಗಳಿಗೆ ಭದ್ರಾದಿಂದ ಶುದ್ಧ ಕುಡಿಯುವ ನೀರು ಪೂರೈಸುವ 38.72 ಕೋಟಿ ರೂ.ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ತಿಳಿಸಿದರು.

ಗಣಿಗಾರಿಕೆಗೆ ಈ ಹಿಂದೆ ಅನುಮತಿ ನೀಡಲಾಗಿತ್ತಾದರೂ, ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ನೀಡಲಾಗಿದ್ದ ಅನುಮತಿ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಅದನ್ನು ಸಂಪುಟ ಮುಂದುವರೆಸಲು ಅನುಮೋದಿಸಿದೆ. ಇಂತಹ ತಾಂತ್ರಿಕ ಅಡಚಣೆಗಳಿಂದ ಕಾರ್ಯರೂಪಕ್ಕೆ ಬಾರದ ಎಲ್ಲಾ ಗಣಿಗಾರಿಕೆಗಳಿಗೂ ಸಂಪುಟ ಹಸಿರು ನಿಶಾನೆ ತೋರುವ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಜಯಚಂದ್ರ ವಿವರಿಸಿದರು.

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕೋಡಿಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು 347-12 ಎಕರೆ ಜಮೀನಿಗೆ ಭೂ ಉಪಯೋಗ ನಿರ್ವಹಣೆ ಬಗ್ಗೆ ನೀತಿ ರೂಪಿಸುವುದು ಹಾಗೂ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್‌ರವರಿಗೆ 10 ಎಕರೆ ಭೂಮಿಯನ್ನು ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

2018-19ನೆ ಶೈಕ್ಷಣಿಕ ಸಾಲಿಗೆ ಸರಕಾರಿ ಶಾಲೆಗಳಲ್ಲಿನ 1-10ನೆ ತರಗತಿಗಳಲ್ಲಿನ ಸುಮಾರು 48 ಲಕ್ಷ ವಿದ್ಯಾರ್ಥಿಗಳಿಗೆ 130 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸುವ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಸರಕಾರಿ ರೇಷ್ಮೆ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸಿ ಮೃತಪಟ್ಟ ನೌಕರರ 14 ಮಂದಿ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಸಬಾ ಹೋಬಳಿ ಬ್ಯಾಡರಹಳ್ಳಿ ಗ್ರಾಮದಸ.ನಂ.9ರಲ್ಲಿ 1.05 ಎಕರೆ ಗೋಮಾಳ ಜಮೀನನ್ನು ನೆಲಮಂಗಲ ತಾಲೂಕು ಕುರುಬರ ಸಂಘಕ್ಕೆ ವಿದ್ಯಾರ್ಥಿನಿಲಯ, ಕನಕಭವನ ಹಾಗೂ ಅಂಗವಿಕಲ ಶಾಲೆ ನಿರ್ಮಾಣದ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆ ಎಂದು ಜಯಚಂದ್ರ ಹೇಳಿದರು.

ಕೋಲಾರ ಜಿಲ್ಲೆ ಮತ್ತು ತಾಲೂಕಿನ ಹುತ್ತೂರು ಹೋಬಳಿಯ ಹೊಳಲಿ ಗ್ರಾಮದ ಸ.ನಂ.103ರಲ್ಲಿ 16 ಎಕರೆ ಸರಕಾರಿ ಗೋಮಾಳ ಜಮೀನನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಕ್ರಿಕೆಟ್ ಸ್ಟೇಡಿಯಂ ಸ್ಥಾಪಿಸಲು ಮಾರುಕಟ್ಟೆ ದರದ ಶೇ.10ರಷ್ಟು ಮೊತ್ತದಲ್ಲಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ದೇವನಹಳ್ಳಿ ಗ್ರಾಮದ ಸ.ನಂ.157ರಲ್ಲಿ 1 ಎಕರೆ ಸರಕಾರಿ ಬಿ ಖರಾಬು ಜಮೀನನ್ನು ದೇವನಹಳ್ಳಿ ತಾಲೂಕು ಒಕ್ಕಲಿಗರ ಸಂಘಕ್ಕೆ ಬಡಮಕ್ಕಳ ವಿದ್ಯಾರ್ಥಿನಿಲಯ ಹಾಗೂ ವಿದ್ಯಾಸಂಸ್ಥೇಗಳನ್ನು ಸ್ಥಾಪಿಸಲು ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಬೆಟ್ಟ ಕುರುಬ ಜಾತಿಯನ್ನು ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಯ ಕ್ರಮ ಸಂಖ್ಯೆ 16ರಲ್ಲಿನ ‘ಕಾಡು ಕುರುಬ’ ಜಾತಿಗೆ ಸಮನಾಂತರ ಪದವಾಗಿ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ಹೇಳಿದರು.

ರಾಣೇಬೆನ್ನೂರು ನಗರಸಭೆ ವ್ಯಾಪ್ತಿಯಲ್ಲಿರುವ ನಗರಸಭೆ ಮಾಲಕತ್ವದ ಪೂರ್ವ ಬಡಾವಣೆಯ 623 ನಿವೇಶನಗಳನ್ನು ಹಾಗೂ ಪಶ್ಚಿಮ ಬಡಾವಣೆಯ 652 ನಿವೇಶನಗಳನ್ನು ಭೂ ಬಾಡಿಗೆ ಕೊಟ್ಟಂತಹ ಆಸ್ತಿಗಳನ್ನು ಭೂ ಬಾಡಿಗೆದಾರರಿಗೆ ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಪೌರಾಡಳಿತ ನಿರ್ದೇಶನಾಲಯವನ್ನು ಬಲಪಡಿಸುವ ಬಗ್ಗೆ ಮತ್ತು ಪರಿಣಿತ ಸಮಿತಿಯ ಶಿಫಾರಸ್ಸಿನ ಅನ್ವಯ ‘ಪೌರಾಡಳಿತ ಆಯುಕ್ತಾಲಯ’ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ರೆಲ್ವೆ ಯೋಜನೆಗಳಿಗಾಗಿ ಆಯಾ ಜಿಲ್ಲಾಧಿಕಾರಿಗಳೆ ನೇರವಾಗಿ ಭೂಮಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಯಚಂದ್ರ ಹೇಳಿದರು.

ಕೆಪೆಕ್ ಸಂಸ್ಥೆಯ ವತಿಯಿಂದ ತೋಟಗಾರಿಕೆ ಇಲಾಖೆಯ ಪೂಜೇನಹಳ್ಳಿ ತೋಟಗಾರಿಕಾ ಕ್ಷೇತ್ರದ ಜಮೀನಿನಲ್ಲಿ 24.60 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮಗ್ರ ಶೀತಲ ಸರಪಳಿ ಘಟಕ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಮದ್ದಕ್ಕನಹಳ್ಳಿ ಗ್ರಾಮದಲ್ಲಿ ಸರ್ವೆ ನಂ.12ರಲ್ಲಿ 9 ಎಕರೆ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಭೋವಿ ಜನಾಂಗದವರು ಕಲ್ಲು ಕುಟುಕರ ಸಂಘ ನಿರ್ಮಿಸಿಕೊಂಡು ಕ್ವಾರಿಯಿಂದ ಗ್ರೇ ಗ್ರಾನೈಟ್ ಕಲ್ಲು ತೆಗೆಯುವ ಕೆಲಸವನ್ನು ಸುಮಾರು 6 ಸಾವಿರ ಜನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂಘದವರು ಭೋಗ್ಯಕ್ಕೆ ಹಾಕಿಕೊಂಡಿದ್ದ ಕರಾರು ಅವಧಿ ಮುಗಿದಿದ್ದು, ಅದನ್ನು ನವೀಕರಿಸಿಕೊಂಡಿದ್ದಾರೆ. ಆದರೆ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿರಲಿಲ್ಲ. ಇದರಿಂದ, ತೀವ್ರ ಸಂಕಷ್ಟದಲ್ಲಿದ್ದ ಕಸುಬುದಾರರಿಗೆ ನೆರವು ಒದಗಿಸಲು ಅಡ್ವೊಕೆಟ್ ಜನರಲ್ ಅಭಿಪ್ರಾಯ ಪಡೆದು ನಿಯಮಾಳಿಗಳನ್ನು ಬದಲಾಯಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ 60 ಹಾಸಿಗೆಗಳ ಹೆಂಗಸರು ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯ 2 ಎಕರೆ 9 ಗುಂಟೆ ಜಮೀನನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ಗ್ರಾಮದಲ್ಲಿ 13 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News