ವಿದ್ವತ್ ಹಲ್ಲೆ ಪ್ರಕರಣದ ಆರೋಪಿ ಅಭಿಷೇಕ್ ಜಾಮೀನಿಗೆ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2018-03-23 16:37 GMT

ಬೆಂಗಳೂರು, ಮಾ.23: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಏಳನೆ ಆರೋಪಿ ಅಭಿಷೇಕ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಆರೋಪಿ ಅಭಿಷೇಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಎಚ್.ಎಸ್.ಚಂದ್ರಮೌಳಿ ಅವರು, ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಅಭಿಷೇಕ್ ಅವರನ್ನು ಏಳನೆ ಆರೋಪಿಯನ್ನಾಗಿ ಮಾಡಲಾಗಿದೆ. ಆದರೆ, ಆರೋಪಿಯು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಮುಹಮ್ಮದ್ ನಲಪಾಡ್ ಜೊತೆಗೆ ಇದ್ದರೂ ಗಲಾಟೆಯಲ್ಲಿ ಭಾಗಿಯಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಕೆಳ ನ್ಯಾಯಾಲಯದಲ್ಲಿ ಅಭಿಷೇಕ್‌ಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸಲಾಗಿದೆ. ಅಲ್ಲದೆ, ಅಭಿಷೇಕ್ ಒಂದು ತಿಂಗಳಿನಿಂದ ಜೈಲುವಾಸವನ್ನು ಅನುಭವಿಸುತ್ತಿದ್ದಾನೆ. ಹೀಗಾಗಿ, ಜಾಮೀನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News