ಕಲಬುರ್ಗಿ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸಲು ಅಸಾಧ್ಯ: ಕೇಂದ್ರ ಸರಕಾರ

Update: 2018-03-23 16:59 GMT

ಹೊಸದಿಲ್ಲಿ, ಮಾ.23: ರಾಷ್ಟ್ರೀಯ ಹಾಗೂ ಅಂತರ್‌ರಾಜ್ಯ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸುವ ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಖ್ಯಾತ ವಿದ್ವಾಂಸ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ ಕೊಲೆ ಪ್ರಕರಣದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕಲಬುರ್ಗಿಯವರ ಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ವಿಶೇಷ ತನಿಖಾ ತಂಡದ ವಶಕ್ಕೆ ನೀಡಬೇಕು ಎಂದು ಕೋರಿ ಕಲಬುರ್ಗಿಯವರ ಪತ್ನಿ ಉಮಾ ಕಲಬುರ್ಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಸುಪ್ರೀಂಕೋರ್ಟ್‌ನ ನ್ಯಾಯಪೀಠದೆದುರು ಈ ಹೇಳಿಕೆ ನೀಡಿದರು.

  ಕಲಬುರ್ಗಿಯವರ ಹತ್ಯೆ ಪ್ರಕರಣ ನಿಗದಿತ ಅಪರಾಧ ಪಟ್ಟಿಗೆ ಸೇರದ ಕಾರಣ ಈ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸಲು ಸಾಧ್ಯವಿಲ್ಲ ಎಂದು ಪಿಂಕಿ ಆನಂದ್ ನ್ಯಾಯಪೀಠಕ್ಕೆ ತಿಳಿಸಿದರು. ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಜುಲೈ ಪ್ರಥಮ ವಾರಕ್ಕೆ ನಿಗದಿಗೊಳಿಸಿತು. ಈ ಅವಧಿಯಲ್ಲಿ ತಮ್ಮ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿತು.

 2015ರಲ್ಲಿ ದಾರವಾಡದಲ್ಲಿ ಕಲಬುರ್ಗಿಯವರನ್ನು ಹಂತಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಬುದ್ಧಿಜೀವಿಗಳಾದ ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಹತ್ಯೆಯಾದ ರೀತಿಗೂ ತನ್ನ ಪತಿಯನ್ನು ಹತ್ಯೆ ಮಾಡಿದ ರೀತಿಗೂ ಸಾಮ್ಯತೆಯಿದೆ. ದಾಭೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ವಿಷಾದನೀಯ ಸ್ಥಿತಿಯಲ್ಲಿದ್ದು, ಇನ್ನೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ಉಮಾ ಕಲಬುರ್ಗಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News