ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ವೇಗದ ಪ್ರಯಾಣಕ್ಕೆ 500 ಕೋ. ರೂ. ಯೋಜನೆಗೆ ರೈಲ್ವೆ ಅನುಮೋದನೆ

Update: 2018-03-23 17:05 GMT

ಬೆಂಗಳೂರು, ಮಾ. 23: ಬೆಂಗಳೂರಿನ ಉಪನಗರದಲ್ಲಿ ಹೆಚ್ಚುತ್ತಿರುವ ಒತ್ತಡ ಗಮನದಲ್ಲಿರಿಸಿಕೊಂಡಿರುವ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ವೈಟ್‌ ಫೀಲ್ಡ್ ನಡುವೆ ಎರಡು ಹೆಚ್ಚುವರಿ ಹಳಿಗಳಿಗೆ ಅವಕಾಶ ನೀಡುವ ಯೋಜನೆಯೊಂದನ್ನು ಮಂಜೂರು ಮಾಡಿದೆ. ಇದಕ್ಕೆ 492.87 ಕೋ.ರೂ. ವೆಚ್ಚವಾಗಲಿದೆ. ಈ ಯೋಜನೆ ಎರಡರಿಂದ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದು ವೈಟ್‌ಫೀಲ್ಡ್‌ನ ಐಟಿ ಕೇಂದ್ರಕ್ಕೆ ವರವಾಗಲಿದೆ.

25 ಕಿ.ಮೀ. ವಲಯದ ದಾರಿಯಲ್ಲಿ 6 ಪ್ರಮುಖ ರೈಲು ನಿಲ್ದಾಣಗಳು ಇರಲಿವೆ. ಬೆಂಗಳೂರು, ಕಂಟೋನ್ಮೆಂಟ್, ಬೆಂಗಳೂರು ಪೂರ್ವ, ಬಯ್ಯಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ ಹಾಗೂ ವೈಟ್‌ಫೀಲ್‌ನ್ನು ಇದು ಒಳಗೊಳ್ಳಲಿದೆ.

ಬೆಂಗಳೂರಿನ ಉಪ ವಲಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರೈಲ್ವೆ ಈ ಯೋಜನೆ ಅಂತಿಮಗೊಳಿಸಿದೆ. ಈ ಯೋಜನೆ ದಿನಂಪ್ರತಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಹಾಗೂ ನಗರಗಳ ನಡುವೆ ಸುಲಭವಾಗಿ, ತ್ವರಿತವಾಗಿ ಪ್ರಯಾಣಿಸಬಹುದು ಎಂದು ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಜನರ ಉಪನಗರದ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಪ್ರಸ್ತುತ ಬೆಂಗಳೂರಿನಿಂದ 146 ರೈಲುಗಳು ಸಂಚರಿಸುತ್ತಿವೆ. ಇದರಲ್ಲಿ 122 ರೈಲುಗಳು ಉಪನಗರದ ರೈಲುಗಳು.

 ಬೆಂಗಳೂರು ವೈಟ್‌ಫೀಲ್ಡ್ ವಲಯದ ನಡುವೆ ಉಪನಗರದ ಹೆಚ್ಚಿನ ರೈಲುಗಳು ಸಂಚರಿಸುತ್ತವೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಳೆದ 18 ತಿಂಗಳಲ್ಲಿ 26 ನೂತನ ಉಪನಗರ ರೈಲು ಸೇವೆ ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News