4ನೇ ಮೇವು ಹಗರಣ: ಲಾಲು ಪ್ರಸಾದ್ಗೆ 14 ವರ್ಷ ಜೈಲು

Update: 2018-03-24 13:43 GMT

ರಾಂಚಿ, ಮಾ. 24: ಮೇವು ಹಗರಣದ ನಾಲ್ಕನೇ ಪ್ರಕರಣವಾದ ಡುಮ್ಕಾ ಟ್ರೆಶರಿ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ವರಿಷ್ಠ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿಗೆ ವಿಶೇಷ ಸಿಬಿಐ ನ್ಯಾಯಾಲಯ ಶನಿವಾರ 14 ವರ್ಷ ಜೈಲು ಹಾಗೂ 60 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸಿಬಿಐ ನ್ಯಾಯಮೂರ್ತಿ ಶಿವಪಾಲ್ ಸಿಂಗ್ ಭಾರತೀಯ ದಂಡ ಸಂಹಿತೆ ಹಾಗೂ ಭ್ರಷ್ಚಾಚಾರ ತಡೆ ಕಾಯ್ದೆ ಅಡಿಯಲ್ಲಿ ಲಾಲು ಪ್ರಸಾದ್‌ಗೆ 7 ವರ್ಷಗಳ ಎರಡು ಶಿಕ್ಷೆ ನೀಡಿದರು.

1995 ಡಿಸೆಂಬರ್‌ನಿಂದ 1996 ಜನವರಿ ನಡುವೆ ಡುಮ್ಕಾ ಟ್ರೆಶರಿಯಿಂದ 3.13 ಕೋ. ರೂ.ಯನ್ನು ಮೋಸದಿಂದ ಪಡೆದ ನಾಲ್ಕನೇ ಮೇವು ಹಗರಣದಲ್ಲಿ ಸಿಬಿಐ ನ್ಯಾಯಾಲಯ ಮಾರ್ಚ್ 19ರಂದು ಲಾಲು ಪ್ರಸಾದ್ ದೋಷಿ ಎಂದು ತೀರ್ಪು ನೀಡಿತ್ತು. ಈ ಹಿಂದೆ ಜನವರಿಯಲ್ಲಿ ಮೂರನೇ ಮೇವು ಹಗರಣಕ್ಕೆ ಸಂಬಂಧಿಸಿ ರಾಂಚಿಯ ಸಿಬಿಐ ನ್ಯಾಯಾಲಯ ಲಾಲು ಪ್ರಸಾದ್‌ಗೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಲಾಲು ಪ್ರಸಾದ್ ಅವರೊಂದಿಗೆ ಜಗನ್ನಾಥ ಮಿಶ್ರಾ ಅವರಿಗೂ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಲಾಲು ಪ್ರಸಾದ್ ಹಾಗೂ ಜಗನ್ನಾಥ ಮಿಶ್ರಾ ಇಬ್ಬರಿಗೂ 5 ಲಕ್ಷ ರೂ. ದಂಡವನ್ನು ಕೂಡ ರಾಂಚಿಯ ಸಿಬಿಐ ನ್ಯಾಯಾಲಯ ವಿಧಿಸಿತ್ತು.

 1992-93ರಲ್ಲಿ ಚೈಬಾಸಾ ಟ್ರೆಶರಿಯಿಂದ ಮಂಜೂರಾದ 7.10 ಲಕ್ಷ ರೂಪಾಯಿ ತೆಗೆಯುವ ಬದಲು 33.67 ಕೋ. ರೂ.ಯನ್ನು ಮೋಸದಿಂದ ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿ ಈ ಶಿಕ್ಷೆ ವಿಧಿಸಲಾಗಿದೆ. ದಿಯೋಗಢ ಟ್ರೆಶರಿಯಿಂದ ಮೋಸದಿಂದ 89.27 ಲಕ್ಷ ರೂಪಾಯಿ ತೆಗೆದ 21 ವರ್ಷಗಳ ಹಿಂದಿನ ಮೇವು ಹಗರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಜನವರಿ 6ರಂದು ಲಾಲು ಪ್ರಸಾದ್‌ಗೆ ಮೂರುವರೆ ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಲಾಲು ಪ್ರಸಾದ್‌ರ ಮೊದಲ ಮೇವು ಹಗರಣಕ್ಕೆ ಸಂಬಂಧಿಸಿ 2013ರಲ್ಲಿ ದೋಷಿ ಎಂದು ಪರಿಗಣಿತವಾಗಿದ್ದು, 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News