ಶಾಸಕ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಮಾಡಿದ ಆರೋಪವೇನು?

Update: 2018-03-24 15:10 GMT

ಬೆಂಗಳೂರು, ಮಾ.24: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಚುನಾವಣಾ ಸಂದರ್ಭದಲ್ಲಿ ಆಮಿಷವೊಡ್ಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಚಿತ್ರನಟ ಹುಚ್ಚ ವೆಂಕಟ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶವಂತಪುರ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿ ಕೊಡುತ್ತೇವೆ ಎಂದು ಸಾರ್ವಜನಿಕರನ್ನು ಕರೆಸಿಕೊಂಡು ಕುಕ್ಕರ್ ಹಂಚಲಾಗುತ್ತಿದೆ. ನನ್ನ ಸ್ವಂತ ಅಕ್ಕನಿಗೂ ಕುಕ್ಕರ್ ನೀಡಿದ್ದಾರೆ. ಕುಕ್ಕರ್ ಬಾಕ್ಸ್ ಮೇಲೆ ಶಾಸಕ ಮುನಿರತ್ನ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಅಲ್ಲದೆ, ಉಚಿತವಾಗಿ ನೀರಿನ ಕ್ಯಾನ್ ವಿತರಿಸಲಾಗುತ್ತಿದೆ. ಈ ಕ್ಯಾನ್‌ಗಳ ಮೇಲೂ ಮುನಿರತ್ನ ಅವರ ಭಾವಚಿತ್ರವಿದೆ ಎಂದು ಕ್ಕುಕರ್ ಹಾಗೂ ನೀರಿನ ಕ್ಯಾನ್ ಪ್ರದರ್ಶಿಸಿದರು.

300 ರೂ. ಕುಕ್ಕರ್ ಕೊಟ್ಟು ಮತ ಪಡೆಯಲು ಯತ್ನಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸರು, ಚುನಾವಣಾ ಆಯೋಗ, ಲೋಕಾಯುಕ್ತ ಕ್ರಮ ಕೈಗೊಳ್ಳಬೇಕು. ಬೋಗಸ್ ವೋಟ್ ಹಾಕುವವರನ್ನು ಪೊಲೀಸರು ಎನ್‌ಕೌಂಟರ್ ಮಾಡಬೇಕು. ಯಾರು ಬೋಗಸ್ ವೋಟ್ ಹಾಕಿಸಲು ಯತ್ನಿಸುತ್ತಾರೋ ಅಂಥವರ ಕೈಕಾಲು ಮುರಿಯಿರಿ ಎಂದು ನಮ್ಮ ಹುಚ್ಚ ವೆಂಕಟ್ ಸೇನೆ ಹುಡುಗರಿಗೆ ಸೂಚಿಸಿದ್ದೇನೆ. ಮತಪಡೆಯಲು ಕುಕ್ಕರ್ ನೀಡುತ್ತಿರುವುದನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದೇನೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹುಚ್ಚ ವೆಂಕಟ್ ಆಗ್ರಹಿಸಿದರು.

ನಾನು ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ಪಕ್ಷದವರು ಯಶವಂತಪುರದಿಂದ ಸ್ಪರ್ಧಿಸಿ ಎಂದು ಹೇಳಿದಾಗ ನಿರಾಕರಿಸಿದೆ. ಇನ್ನು ಯಾವ ಪಕ್ಷ ಅಥವಾ ಅಭ್ಯರ್ಥಿಯ ಪರವೂ ಪ್ರಚಾರ ಮಾಡುವುದಿಲ್ಲ. ರಾಜ್ಯದ ಮತದಾರರು ರಾಜಕಾರಣಿಗಳ ಆಮಿಷಗಳಿಗೆ ಒಳಗಾಗಬಾರದು. ಉತ್ತಮ ಕೆಲಸ ಮಾಡಿದ ಅಭ್ಯರ್ಥಿಗೆ ಮತ ಹಾಬೇಕು ಎಂದು ಮನವಿ ಮಾಡಿದರು.

ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಿಂದ ನಮ್ಮ ಕಾರ್ಯಕರು ಹಾಗೂ ಕಾರ್ಪೋರೇಟರ್‌ಗಳು ಜೊತೆಯಾಗಿ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಕುಕ್ಕರ್, ಗ್ಯಾಸ್ ಇನ್ನಿತರೆ ವಸ್ತುಗಳನ್ನು ನೀಡುತ್ತಿದ್ದೇವೆ. ಆದರೆ, ಹುಚ್ಚ ವೆಂಕಟ್ ನನ್ನ ಆತ್ಮೀಯ ಸ್ನೇಹಿತನಾದರೂ, ನನ್ನ ವಿರುದ್ಧ ಯಾಕೆ ಆರೋಪ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. 10 ದಿನಗಳ ಹಿಂದೆ ನನ್ನ ಕಚೇರಿಗೆ ಬಂದಿದ್ದ ಹುಚ್ಚ ವೆಂಕಟ್ ಒಂದು ವಿಷಯ ಕುರಿತು ಬೇಡಿಕೆಯಿಟ್ಟದ್ದರು. ಅದನ್ನು ಈಡೇರಿಸಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ
-ಮುನಿರತ್ನ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News