ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತುವ ಕೆಲಸವಾಗಲಿ: ದಿನೇಶ್ ಅಮೀನ್‌ಮಟ್ಟು

Update: 2018-03-24 15:18 GMT

ಬೆಂಗಳೂರು, ಮಾ.24: ಫ್ಯಾಶಿಸ್ಟ್ ಶಕ್ತಿಗಳು ಬುದ್ಧಿಜೀವಿ, ಚಿಂತಕರು, ಸಾಹಿತಿಗಳನ್ನು ವಿರೋಧಿಸುತ್ತಲೇ ಇಡೀ ದೇಶವನ್ನು ಕೇಸರಿಕರಣಗೊಳಿಸಲು ಪ್ರಯತ್ನಿಸುತ್ತಿವೆ. ಹೀಗಾಗಿ, ನಾವೆಲ್ಲರೂ ಒಂದಾಗಿ ಈ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕಾಗಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಕರೆ ನೀಡಿದ್ದಾರೆ.

ಶನಿವಾರ ಎಸ್‌ಸಿಎಂ ಹೌಸ್‌ನಲ್ಲಿ ಸಮುದಾಯ ಕರ್ನಾಟಕ ಹಾಗೂ ಕ್ರಿಯಾ ಮಾಧ್ಯಮ ಆಯೋಜಿಸಿದ್ದ ಪ್ರತಿಮೆ ಭಂಜನೆ ಮತ್ತು ವಿಚಾರವಾದ ವಿಚಾರಗೋಷ್ಠಿ ಹಾಗೂ ಕ್ಯಾಸ್ಟ್ರೋ ಕಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಘಪರಿವಾರದಲ್ಲಿ ಬಲವಾದ ಬುದ್ಧಿಜೀವಿಗಳು, ಚಿಂತಕರು ಹಾಗೂ ಸಾಹಿತಿಗಳೂ ಇಲ್ಲ. ಹೀಗಾಗಿ, ಈ ಸಂಘಿಗಳು ಎಡಪಂಥೀಯ ಚಿಂತಕರನ್ನು ವಿರೋಧಿಸುತ್ತಲೇ ದೇಶವನ್ನು ಒಡೆಯುಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ನಾವೆಲ್ಲರೂ ಒಂದಾಗಿ ಇಂತಹ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಬೇಕಾಗಿದೆ ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದರು ಪ್ರತಿಮೆ ಸ್ಥಾಪನೆಯನ್ನು ಹಾಗೂ ಮೂರ್ತಿ ಪೂಜೆಯನ್ನು ವಿರೋಧಿಸಿದವರು. ಆದರೆ, ಸಂಘಪರಿವಾರದವರು ಸ್ವಾಮಿ ವಿವೇಕಾನಂದರನ್ನು ನಮ್ಮವರು ಎನ್ನುತ್ತಲೇ ಅವರ ಪ್ರತಿಮೆ ಸ್ಥಾಪಿಸುವ ಹಾಗೂ ಅವರನ್ನು ಪೂಜಿಸುವ ಕೆಲಸ ಮಾಡಿ ಅವರಿಗೆ ಅಪವಾನಗೊಳಿಸಿದ್ಧಾರೆ ಎಂದು ಕಿಡಿಕಾರಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ, ಕ್ಯೂಬಾದ ಅಧ್ಯಕ್ಷರಾಗಿದ್ದ ಫಿಡೆಲ್ ಕ್ಯಾಸ್ಟ್ರೋ ಅವರು ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದರೂ ಅವುಗಳೆಲ್ಲವನ್ನೂ ಧಿಕ್ಕರಿಸಿ ಕಾರ್ಮಿಕರ, ಬಡವರ, ನಿರುದ್ಯೋಗಿ ಹಾಗೂ ರೈತರ ಪರವಾಗಿ ನಿಂತು ಹೋರಾಟ ನಡೆಸಿದರು. ಇಡೀ ಕ್ಯೂಬಾ ದೇಶದಲ್ಲಿ ಉಚಿತ ಶಿಕ್ಷಣ, ಆರೋಗ್ಯ ಒದಗಿಸಿದರು ಹಾಗೂ ನಿರುದ್ಯೋಗವನ್ನು ಹೋಗಲಾಡಿಸಿ ಯುವಕರಿಗೆ ಉದ್ಯೋಗವನ್ನು ಒದಗಿಸಿದರು ಎಂದು ಹೇಳಿದರು.

ಅಮೆರಿಕವನ್ನು ಭೂಮಿಯ ಮೇಲಿರುವ ಸ್ವರ್ಗ ಎಂದು ನಾವು ಭಾವಿಸಿದ್ದೇವೆ. ಆದರೆ, ಅಮೆರಿಕದಲ್ಲಿ ಈಗಲೂ ಡ್ರಗ್ಸ್ ಮಾಫಿಯಾ, ಶಸ್ತ್ರಾಸ್ತ್ರ ಹಾಗೂ ವೇಶ್ಯಾವಾಟಿಕೆ ಮಾಫಿಯಾ ಹೇರಳವಾಗಿ ನಡೆಯುತ್ತಿವೆ. ಆದರೆ, ಈ ಮಾಫಿಯಾ ಎಂಬ ಅನಿಷ್ಟಗಳನ್ನು ಕ್ಯೂಬಾ ಎಂಬ ಚಿಕ್ಕ ದೇಶ ವಿರೋಧಿಸಿತು. ಹಾಗೂ ಅಮೆರಿಕವನ್ನು ವಿರೋಧ ಕಟ್ಟಿಕೊಂಡು ಬದುಕಿತು ಎಂದು ಹೇಳಿದರು.

ವಿಚಾರವಾದಿಗಳಾದ ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಪೆರಿಯಾರ್, ಸಾವಿತ್ರಿಬಾಯಿ ಫುಲೆ ಅವರು ಪ್ರತಿಮೆಗಳ ಸ್ಥಾಪನೆಯನ್ನು ವಿರೋಧಿಸಿದವರು. ಆದರೆ, ಅವರ ಪ್ರತಿಮೆಗಳನ್ನೆ ಸ್ಥಾಪಿಸಿದ್ದಾರೆ. ಹೀಗಾಗಿ, ಇನ್ನು ಮುಂದೆಯಾದರೂ ಪ್ರತಿಮೆಗಳ ಸಂಸ್ಕೃತಿ ನಿಲ್ಲಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿ ಪೋಸ್ಟ್ ಡಾಕ್ಟರಲ್ ಫೆಲೊ ಅರುಣ ಜೋಳದ ಕೂಡ್ಲಿಗಿ, ದಸಂಸ ರಾಜ್ಯ ಸಂಚಾಲಕ ಮೋಹನ್‌ರಾಜ್, ಪತ್ರಕರ್ತ ನವೀನ್ ಸೂರಿಂಜೆ, ಕ್ರಿಯಾ ಮಾಧ್ಯಮ ಎನ್.ಕೆ.ವಸಂತರಾಜ, ಹೋರಾಟಗಾರ್ತಿ ಕೆ.ಎಸ್.ವಿಮಲ, ಡಾ.ಕೆ.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News