ಪೋಲಾಗುವ ನದಿ ನೀರಿನ ನಿರ್ವಹಣೆಗೆ ವಿಶೇಷ ಆದ್ಯತೆ: ನಿತಿನ್ ಗಡ್ಕರಿ

Update: 2018-03-24 16:46 GMT

ಬೆಂಗಳೂರು, ಮಾ.24: ದೇಶದಲ್ಲಿ ನೀರಿನ ಸಮಸ್ಯೆಯಿಲ್ಲ. ಆದರೆ, ನಿರ್ವಹಣೆಯಲ್ಲಿ ಸಮಸ್ಯೆಗಳಿವೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಶನಿವಾರ ಟಿಐಐ ಸಂಘಟನೆ ಹಮ್ಮಿಕೊಂಡಿದ್ದ ಇಂಡಸ್ಟ್ರಿ ನೆಕ್‌ಸ್ಟ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಮಾಲಯ ಶ್ರೇಣಿ ಮತ್ತು ಇತರೆ ಭಾಗಗಳಿಂದ ಹರಿದು ಬರುವ ಸಾಕಷ್ಟು ಪ್ರಮಾಣದ ನೀರು ಸಮುದ್ರ ಸೇರುವ ಮೂಲಕ ಪೋಲಾಗುತ್ತಿದೆ. ಈ ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ಜನತೆಯ ಅಗತ್ಯಗಳಿಗೆ ಪೂರೈಕೆ ಮಾಡಲು ವಿಶೇಷ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ದೇಶದೆಲ್ಲೆಡೆ ವಿವಿಧ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸುವಂತಹ ಯೋಜನೆ ಹಮ್ಮಿಕೊಳ್ಳಲಾಗಿದೆ. ಗೋದಾವರಿ ನದಿಗೆ ಆಂಧ್ರ ಪ್ರದೇಶದ ಪೋಲಾವರಂ ಬಳಿ 60ಸಾವಿರ ಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಲಾಗುತ್ತದೆ. ಅದರಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೋಟ್ಯಂತರ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ತೆಲಂಗಾಣದ ಪೋಲಾವರಂನಿಂದ ಕಾವೇಶ್ವರ ಯೋಜನೆಯಡಿ ಇಂದ್ರವತಿ ನದಿಯನ್ನು ಸಂಪರ್ಕ ಪಡೆದುಕೊಂಡು ಕಾವೇರಿ ನದಿಗೆ ಜೋಡಣೆ ಮಾಡಲಾಗುವುದು. ಇದರಿಂದ ಕರ್ನಾಟಕಕ್ಕೆ 750ಟಿಎಂಸಿ ನೀರು ಸಿಗಲಿದೆ. ಈ ಯೋಜನೆಯನ್ನು ಸದ್ಯದಲ್ಲಿಯೆ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಭೂಸಾರಿಗೆ ಇಲಾಖೆ ಪ್ರತಿದಿನಕ್ಕೆ 28ಕಿಮೀ ರಸ್ತೆ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಕೇವಲ 3ಕಿಮೀ ರಸ್ತೆ ನಿರ್ಮಾಣವಾಗುತ್ತಿದ್ದು, ಇದನ್ನು 40ಕಿಮೀ ರಸ್ತೆ ಏರಿಸಲು ಗುರಿ ಹೊಂದಲಾಗಿದೆ. ದೇಶದಲ್ಲಿ 3,85,000 ಸಾವಿರ ಕೋಟಿ ರೂ.ವೆಚ್ಚದಲ್ಲಿ 200 ರಸ್ತೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಕಾರವಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಂದರು ನಿರ್ಮಾಣ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, 3 ಸಾವಿರ ಕೋಟಿ ರೂ.ವೆಚ್ಚದ ಬಂದರು ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರಕಾರದಿಂದ ಅನುಮತಿ ಸಿಕ್ಕ ಕೂಡಲೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.
-ನಿತಿನ್ ಗಡ್ಕರಿ ಜಲಸಂಪನ್ಮೂಲ ಸಚಿವ ಕೇಂದ್ರ ಸರಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News